Wednesday, August 18, 2010

ಅಪ್ಪ..ಅಪ್ಪ ನನಗೆ ನೀನು ಬೇಕು...

ಅಪ್ಪ ಹೆಣ್ಮುಮಕ್ಕಳಿಗೆ ಹೀರೋ. ಜಗತ್ತಿನ ಎಲ್ಲ ಹುಡುಗಿಯರಿಗೆ ಒಂದು ಸೆಕ್ಯೂರ್ಡ್ ಫೀಲ್. ಅಮ್ಮ ಕಷ್ಟ ಅರ್ಥ ಮಾಡಿಕೊಳ್ತಾಳೆ. ಬೆಂಬಲಕ್ಕೆ ಅಪ್ಪಬೇಕು. ಅಪ್ಪನೇ ಎಲ್ಲ. ಆದ್ರೆ, ನಾವು ಈ ಫೀಲ್ ಬಿಟ್ಟು ಹೊರಗಡೆ ಬಂದೇಯಿಲ್ಲ. ಸೃಷ್ಟಿಯ ಸಹಜ ನಿಯಮದಂತೆ ಹೆಣ್ಣುಮಕ್ಕಳು ಅಪ್ಪನತ್ತ ವಾಲುತ್ತಾರೆ. ಗಂಡು ಮಕ್ಕಳು ಅಮ್ಮನ ಒಲವಿಗೆ ಕರಗುತ್ತಾರೆ. ಈ ನಡುವೆ ಅಪ್ಪನೂ ಮಗನನ್ನ ತುಂಬಾ ಪ್ರೀತಿಸಬಲ್ಲ ಅನ್ನೋ ಸತ್ಯ ನಿಜಕ್ಕೂ ಕಣ್ಮುಂದೆ ಬರಲೂ ಸಾಧ್ಯವಿಲ್ಲ...

ಆದ್ರೆ, ಹಾಲಿವುಡ್ ಇಂಥಹ ಪ್ರಯತ್ನ ಮಾಡಿದೆ. "ಎಮ್ಟನ್ ಮಗನ್" ಅಂಥ ತಮಿಳ್ ಚಿತ್ರರಂಗ ಅಪ್ಪ-ಮಗನ ಭಾವನಾತ್ಮಕ ಸಂಬಂಧದ ಮೌಲ್ಯ ತೆರೆದಿಟ್ಟು ದುಡ್ಡು ಬಾಚಿಕೊಂಡಿದೆ. ಕನ್ನಡ ಚಿತ್ರರಂಗ ಈಗ ಅದಕ್ಕೆ ಕೈಹಾಕಿದೆ. "ಪುತ್ರ" ಅನ್ನೊ ಚಿತ್ರ ಇದೇ ಭಾವದಲ್ಲಿಯೆ ಮಿಡಿಯಲಿದೆ. ತಂದೆಯ ಭದ್ರ ಬುನಾದಿಯಂತಹ ಸಲಹೆ..ಸಿಡುಕು..ಸಹಕಾರಗಳು "ಪುತ್ರ"ದಲ್ಲಿ ಗಂಡು ಮಕ್ಕಳ ಎದೆ ತಟ್ಟಲಿವೆ..

ಪುತ್ರದ ನಾಯಕನಾರಿರಬಹುದು ಅಂತ ನೀವು ಥಿಂಕ್ ಮಾಡ್ತಿರಬಹುದು. ಮನಸಾರೆ.. ನಾಯಕ ದಿಗಂತ್ ಪುತ್ರದ ಪುತ್ರ. ಅವಿನಾಶ್ ತಂದೆಯ ಪಾತ್ರಧಾರಿ. ಇವರ ಮಧ್ಯೆದ ಕಥೆನೇ "ಪುತ್ರ" ಆದ್ರೂ, ಚಿತ್ರದಲ್ಲಿ ಪ್ರೀತಿಯ ಎಳೆಯಿದೆ. ತ್ರೀಕೋನ ಪ್ರೀತಿಯ ಅಲೆ ಇಲ್ಲೂ ಹರೆಯುತ್ತದೆ. ಹಳ್ಳಿಯ ಹುಡುಗಿ...ಶಹರದ ಬೆಡಗಿ ಅಂತಲೇ ಕಥೆಗೆ ಎರಡು ಫ್ಲೆವರ್ ನೀಡಲಾಗಿದೆ. ಹಳ್ಳಿಯ ಚೆಲುವೆಯಾಗಿ "ಅಂಬಾರಿ" ಸುಪ್ರಿತಾ ಆಕ್ಟಿಂಗ್. ನಗರದ ಹುಡುಗಿಯಾಗಿ ರೂಪಶ್ರೀ ಕಾಣಿಸಿಕೊಳ್ತಾಯಿದ್ದಾರೆ...

ಹಿರಿಯ ನಿರ್ದೇಶಕ ಉಮಾಕಾಂತ್ ರ ಈ ಕನ್ನಡದ ಪ್ರಯತ್ನಕ್ಕೆ ನಟ ದಿಗಂತ್ ತುಂಬಾ ಸಂತಸಗೊಂಡಿದ್ದಾರೆ. ಚಿತ್ರದಲ್ಲಿ ಅಭಿನಯಿಸುತ್ತಲೇ ತಮ್ಮ ತಂದೆಯ ನೆನಪು ಮಾಡಿಕೊಂಡಿದ್ದಾರೆ. ಕಾರಣ, ತಂದೆಯ-ಮಗನ ಫೀಲಿಗ್ಸ್ ಇಲ್ಲಿ ಅಷ್ಟೊಂದು ಆಳ ಅಷ್ಟೊಂದು ನಿರಾಳ...ಇದನ್ನ ಕನ್ನಡದ ಮಂದಿ ಹೇಗೆ ತೆಗೆದುಕೊಳ್ತಾರೋ ಏನೋ. ಒಳ್ಳೆಯ ಪ್ರಯತ್ನವಂತು ಇಲ್ಲಿ ಆಗ್ತಾಯಿದೆ...
-ರೇವನ್ ಪಿ.ಜೇವೂರ್

Monday, August 16, 2010

ಬ್ಯಾನರ್ ಕಲೆಯಿಂದ ಚಿತ್ರಕಲೆಯತ್ತ....

ಬ್ಯಾನರ ಬದುಕು ದುಸ್ಥರ. ಪೋಸ್ಟರ್ ನಂಬಿ ಅದೆಷ್ಟೋ ಜನರ ಹೊಟ್ಟೆ ಖಾಲಿ..ಖಾಲಿ. ತಿಂಗಳು ಗಟ್ಟಲೇ ಕಟೌಟ್ ಬರೆದು ಕಾಸು ಕಾಣದ ಇನ್ನದೇಷ್ಟೋ "ಕಲಾವಿದರು" . ಇದು ಬಣ್ಣ ನಂಬಿ ಕುಂಚದ ಮೋಹಕ್ಕೆ ಬಿದ್ದವರ ಸತ್ಯ ಕಥೆ. ಆಧುನಿಕತೆಯ ಅಬ್ಬರಕ್ಕೆ ವಿನೈಲ್ ಸೃಷ್ಟಿಯೇನೋ ಆದವು. ಮಳೆಯ ಹೊಡತೆಕ್ಕೆ ಗಾಳಿಯ ತಿವಿತಕ್ಕೆ ಜಗ್ಗದೇ ನಿಂತು ಬಿಟ್ಟವು. ಆದ್ರೆ, ಬಣ್ಣವನ್ನೇ ನಂಬಿದ ಬ್ಯಾನರ್ ಕಲಾವಿದರು ಕೆಲಸವಿಲ್ಲದೇ ಅತಂತ್ರವಾಗಿದ್ದಾರೆ.

ಬ್ಯಾನರ್ ಕಲಾವಿದ ಕೆ. ಚಿನ್ನಪ್ಪ ಕೂಡ ಇದನ್ನ ಎದುರಿಸಿದವರು. ಆದ್ರೆ, ಚಿನ್ನಪ್ಪ ಸ್ವಲ್ಪ ಮಗ್ಗಲು ಬದಲಿಸಿದರು. ಹೊಟ್ಟೆಗೆ ಹಿಟ್ಟುಕೊಟ್ಟ ಬ್ಯಾನರ್ ಕಲೆ ಜೊತೆಗೆ ಚಿತ್ರಕಲೆಯಲ್ಲೂ ಆಸಕ್ತಿ ಬೆಳಸಿಕೊಂಡರು. ನಮ್ಮಲ್ಲಿಯ ಪ್ರೇಕ್ಷಣಿಯ ಸ್ಥಳಗಳಿಗೆ ಬೇಟಿಕೊಟ್ಟರು. ಅಲ್ಲಿಯ ಶಿಲ್ಪ ಕಲೆಯನ್ನ ತಮ್ಮ ಕುಂಚದಿ ಕ್ಯಾನ್ ವಾಸ್ ಗೆ ತರಲು ಆರಂಭಿಸಿದರು. ಇದರ ಫಲ ೨೦೦೫ ರಲ್ಲಿ ಶುರುವಾದ ಇವರ ಕುಂಚದ ಪಯಣ ಇಲ್ಲಿವರೆಗೂ ಸಾಥ್ ನೀಡಿದೆ.

ಇವುಗಳ ನಡುವೆ ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ. ದೇಶ-ವಿದೇಶದಲ್ಲೂ ಚಿನ್ನಪ್ಪನವರ ಕಲೆಯ ಆರಾಧಕರಿದ್ದಾರೆ. ತೈಲವರ್ಣದ ಚಿತ್ರಗಳನ್ನ ಖರೀದಿಸಿಕೊಂಡು ತಮ್ಮ ಮನೆಯ ಗೋಡೆಗಳನ್ನ ಅಲಂಕರಿಸಿದ್ದಾರೆ. ಅಲ್ಲಂಕರಿಸುತ್ತಲೇ ಇದ್ದಾರೆ...

ಚಿನ್ನಪ್ಪನವರ ಬಣ್ಣದ ಬದುಕು ಇದೇ ರೀತಿ ಶ್ರೀಮಂತವಾಗಿಯೇ ಸಾಗಿದೆ. ಕಳೆದ ವರ್ಷ ೧೮ ಚಿತ್ರಗಳನ್ನ ಬಿಡಿಸಿದ್ದರು. ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲೂ ತಮ್ಮ ಕಲಾಪ್ರತಿಭೆಯನ್ನ ಪ್ರದರ್ಶಿದರು. ಇದಾದ ನಂತರ ಚಿನ್ನಪ್ಪನವರ ಕಲಾಪ್ರೀತಿ ಮತ್ತೆ ಮೈಗೊಡವಿ ನಿಂತಿದೆ. ಅಜಂತಾ,ಹಂಪಿ, ಒಂಟಿ ಸಲಗ, ಸಿಂಹದ ಕುಟುಂಬ, ಚಿಗುರೆಯ ಕಾದಾಟ, ಹೀಗೆ ೨೭ ಚಿತ್ರಗಳನ್ನ ಬಿಡಿಸಿದ್ದಾರೆ. ಇವುಗಳನ್ನ ಸಹ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಆ. ೨೩ ರಿಂದ ಆ.೩೦ ರವೆರಗೂ ಪ್ರದರ್ಶಿಸಲಿದ್ದಾರೆ..

ಇದೇನೋ ಚಿತ್ರ ಕಲೆಯ ಕಥೆ. ಆದ್ರೆ, ಬ್ಯಾನರ್ ಮೋಹ ಚಿನ್ನಪ್ಪನವರನ್ನ ಬಿಟ್ಟು ಹೋಗಿಲ್ಲ. ಇನ್ನುಯಿದೆ. ಸರಿ ಸುಮಾರು ೬೨ ವರ್ಷಗಳೇ ಸಿನೆಮಾ ಬ್ಯಾನರ್ ಬರೆಯುವಲ್ಲಿ ಕಳೆದು ಹೋಗಿವೆ. ಬೇಡರಕಣ್ಣಪ್ಪ ಚಿತ್ರದಿಂದ ಆರಂಭವಾಗಿ ಕನ್ನಡದ ಎಲ್ಲ ನಾಯಕರ ಚಿತ್ರದ ಪೋಸ್ಟರ್ ಗಳು, ಬ್ಯಾನರ್ ಗಳು, ಕಟೌಟ್ ಗಳನ್ನ ರೂಪಿಸಿಕೊಟ್ಟಿದ್ದಾರೆ. ಇನ್ನೇನು ತೆರೆಗೆ ಬರಲಿರುವ ದರ್ಶನ್ ಅಭಿನಯದ "ಶೌರ್ಯ" ಚಿತ್ರಕ್ಕೂ ಇವರೇ ಕೆಲಸ ಮಾಡ್ತಿದ್ದಾರೆ. ೭೨ ರ ಇಳಿವಯಸ್ಸಿನಲ್ಲಿ ಈಗಲೂ ಅದೇ ಉತ್ಸಾಹದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಹಲವು ಕನಸೂ ಕಾಣುತ್ತಿದ್ದಾರೆ. ಇವರ ಹಿರಿಯ ಕನಸ್ಸಿಗೊಂದು ಸಲಾಮ್..

- ರೇವನ್ ಪಿ.ಜೇವೂರ್

Friday, August 13, 2010

ಮಾಡರ್ನ್ ರಾಮಾಯಣ...

ರಾವಣ ಸೀತೆನ್ ಕದ್ದ ಹೂವಲ್ ಮಾಡಿದ ಫ್ಲೈಟಲಿ ಕಾರಣ, ಸಿಸ್ಟರ್ ಸೆಂಟಿಮೆಂಟ್ಸು.... ಕೌರವ ಹಳ್ಳಕ್ಕ ಬಿದ್ದ ಶೆಕುನಿ ಹಾಕಿದ ಸ್ಕೆಚಲಿ ಕಾರಣ, ರಿಯಲ್ ಎಸ್ಟೇಟು..

ರಾಮಾಯಣವನ್ನ ಹೀಗೆ ಹೇಳಿದ್ರೆ ಹೇಗೆ. ನಿಜ, ನಗು ಬರುತ್ತದೆ ಅಲ್ವೆ. ಈ ಒಂದು ಪ್ರಯೋಗವನ್ನ ನಮ್ಮ ಕನ್ನಡದವರೇ ಮಾಡಿದ್ದಾರೆ. ಕಾಮಿಡಿ ಆಕ್ಟಿಂಗ್ ಮಾಡ್ತಾಯಿದ್ದ ಅದೇ ನಾಗ್ ಶೇಖರ್ ತಮ್ಮ ಮೊದಲ ನಿರ್ದೇಶನದ "ಸಂಜು ವೆಡ್ಸ್ ಗೀತಾ" ಚಿತ್ರಕ್ಕೆ ಮೇಲೆ ಹೇಳಿದ ಹ್ಯೂಮರಸ್ ಲಿರಿಕ್ಸ್ ಬರೆಸಿದ್ದಾರೆ. ಡಾಕ್ಟರ್ ನಾಗೇಂದ್ರ ಪ್ರಸಾದ್ ಈ ಒಂದು ಗೀತ ರಚನೆ ಮಾಡಿಕೊಟ್ಟಿದ್ದಾರೆ..

ರಾಮಾಯಣದ ಕಥೆಗೆ ಹ್ಯೂಮರಸ್ ರೂಪ ನೀಡಲು "ಸಂಜು ವೆಡ್ಸ್ ಗೀತಾ" ಟೀಮ್ ಪೌರಾಣಿಕ ರಂಗಭೂಮಿಯ ಗೆಟಪನ್ನೇ ಕನ್ನಡದ ಹಾಸ್ಯ ಕಲಾವಿದರಿಗೆ ಹಾಕಿಸಿದೆ. ರಂಗಾಯಣದ ರಘು ಇಲ್ಲಿ ರಾವಣನ ಪಾತ್ರಧಾರಿ. ಸಾಧುಕೋಕಿಲ್ ಲಕ್ಷ್ಮಣ. ಬುಲೆಟ್ ಪ್ರಕಾಶ್ ಹನುಮನ ಗೆಟಪ್ ಧಾರಿ. ಈ ಕಲಾವಿದರ ಮಧ್ಯೆ ಸೀತೆ ಬೇಕೆ...ಬೇಕು. ಇದನ್ನ ಬೃಂದಾ ಪಾರೇಖ್ ಅನ್ನೊ ಮುಂಬೈನ ಐಟಂ ಗರ್ಲ್ ನಿಭಾಯಿಸಿದ್ದಾರೆ..

ಥೇಟ್ ಸೀತಾಮಾತೆ ಥರ ಕಾಣೋ ಬೃಂದಾ ಈ ಒಂದು ಗೀತೆಯಲ್ಲಿ ೧೦ ಗೆಟಪ್ ಆಗ್ತಾರೆ. ಎಲ್ಲ ದೇವತೆಗಳ ಜೊತೆ...ಜೊತೆಗೆ ಟ್ರೆಂಡಿ ಐಟಂ ಗರ್ಲ್ ಗೆಟಪು ಇಲ್ಲಿ ಬಂದು ಹೋಗುತ್ತದೆ. ಕಾರಣ, ಹೆಣ್ಣಿನ ಬಗೆಗಿನ ಎಲ್ಲ ಕಾಲದ ಚಿತ್ರಣ ನೀಡುವ ಒಂದು ಹ್ಯೂಮರಸ್ ಲಾಜಿಕ್ ಈ ಗೀತೆಯದ್ದು. ಆದ್ರೆ, ಇದು ಕಥೆಯಲ್ಲಿ ಸುಮ್ನೆ ಬಂದು ಹೋಗುದಿಲ್ಲ. ಈ ಖೈದಿಗಳೆಲ್ಲ ತಮ್ಮ ಹೊಸ ಖೈದಿಯನ್ನ ರಂಜಿಸಲಿಕ್ಕೆ ತಾವೇ ತಾವಾಗಿ ಈ ಎಲ್ಲ ಗೆಟಪ್ ಗಳನ್ನ ಹಾಕಿ ದಿಲ್ ಖುಷ್ ಮಾಡ್ತಾರೆ..

ಈ ಒಂದು ಹೊಸ ಪರಿಕಲ್ಪನೆ ಬಗ್ಗೆ ಈಗಷ್ಟೆ ನಿರ್ದೇಶಕ ನಾಗಶೇಖರ್ ಹೇಳಿಕೊಂಡಿದ್ದಾರೆ. ಈ ಮೊದಲು ಕೂಡ ಇದೇ ನಾಗ್ ಶೇಖರ್ ಕಡಿಮೆ ವೆಚ್ಚದಲ್ಲಿ ಒಂದು ಹಾಡು ಮಾಡಿದ್ದರು. ನಗರದ ಬೆನ್ನಿ ಮಿಲ್ ನ ಹಳೆ ಗೋಡೆಗಳಿಗೆ ಬಣ್ಣ ಹಚ್ಚಿ ಯುರೋಪ್ ಸ್ಟ್ರೀಟ್ ಥರವೇ ಅದನ್ನೇ ಬಳಸಿಕೊಂಡಿದ್ದರು. ಅದ್ಭುತ ಅನಿಸೋ ಆ ಲೋಕೇಷನ್ ನಲ್ಲಿ ನಾಯಕ ಶ್ರೀನಗರ ಕಿಟ್ಟಿ ಯ ಮೇಲೆ ರಾಪ್ ಥರದ ಹಾಡೊಂದನ್ನ ಚಿತ್ರೀಕರಿಸಿದರು.


ಆಗ ಸಾಥ್ ನೀಡಿದ ಕ್ಯಾಮರಾಮನ್ ಸತ್ಯ ಹೆಗಡೆ, ಆ ಹಾಡಿಗೂ ನೃತ್ಯ ನಿರ್ದೇಶಿಸಿದ ಇಮ್ರಾನ್ ಸರ್ದಾರಿಯಾ ಈ ಪೌರಾಣಿಕ ಹಾಡಿಗೂ ಜೋಡಿಯಾಗಿದ್ದಾರೆ. ಸದ್ಯಕ್ಕೆ ಶೂಟಿಂಗ್ ಸಮಯದಲ್ಲಿಯೇ ಭಾರೀ ಎಂಟರಟೈನಿಂಗ್ ಅನಿಸಿದ ಈ ರಾವಣನ ಹಾಡು ತೆರೆಗೆ ಬಂದ ಮೇಲ ಇನ್ನು ಸಿಕ್ಕಾಪಟ್ಟೆ ನಗಿಸುತ್ತದೆ ಅಂತಲೇ ಹೇಳಬಹುದು...

-ರೇವನ್ ಪಿ.ಜೇವೂರ್

Monday, August 9, 2010

ನಾ ಓದಿದ "ಯಾರೂ ಅರಿಯದ ವೀರರು"..


ಕನ್ನಡದ ಪುಸ್ತಕಲೋಕದಲ್ಲಿ ಅವಿಷ್ಕಾರಗಳು ನಡೀತಾನೇ ಇರುತ್ತವೆ. ಮಕ್ಕಳ ಸಾಹಿತ್ಯದಲ್ಲೂ ಇಂತಹ ಪ್ರಯೋಗಗಳಿಗೆ ಕೊರೆತೆಯಿಲ್ಲ. ಮಕ್ಕಳ ಮನ ತಟ್ಟುವ...ಮನರಂಜಿಸುವ ಅದೆಷ್ಟೋ ಪುಸ್ತಕಗಳು ಪ್ರಕಟಗೊಂಡಿವೆ. ಕಾಮಿಕ್ ಪುಸ್ತಕಗಳು ಇದೆ ಸಾಲಿಗೆ ಸೇರುವ ಮತ್ತೊಂದು ಸಚಿತ್ರ ಸಾಹಿತ್ಯವೆಂತಲೇ ಹೇಳಬಹುದು. ಆದ್ರೆ, ಸಾಹಿತಿ ತಿರುಮಲೆ ಎಂ.ಎಸ್.ರಾಮಮೂರ್ತಿ ನಿಜಕ್ಕೂ ಹೊಸ ಪ್ರಯೋಗ ಮಾಡಿದ್ದಾರೆ. ಅಂದ್ರೆ, ಮಕ್ಕಳ ಇಷ್ಟಪಡುವ ವಿಷಯವನ್ನೆ ಆಧರಿಸಿ ಇಡೀ ಕಾದಂಬರಿಯನ್ನ ರಚಿಸಿದ್ದಾರೆ..

ಕಾದಂಬರಿ ಮುಖ ಪುಟ ನೋಡಿದರೆ ಮಕ್ಕಳ ಪುಸ್ತಕವೇ ಅಂತಹ ಹಿರಿಯರು ದೂರ ಸರಿಯಬಹುದು. ಆದ್ರೆ, ಓದುತ್ತಾ..ಓದುತ್ತಾ ಹೋದಂತೆ ಕಾದಂಬರಿ ಆಪ್ತವಾಗುತ್ತದೆ. ಕಾಡು ಪ್ರಾಣಿಗಳ ಜೀವನದ ಅರಿವು ಮೂಡುತ್ತಾ ಹೋಗುತ್ತದೆ. ಮೊದಲ ಅಧ್ಯಾಯದಲ್ಲೆ ಲೇಖಕರು ಓದುಗರನ್ನ ಹಿಡಿದಿಡುವ ನಿರೂಪಣೆ ಆರಂಭಿಸುತ್ತಾರೆ. ಮೊದಲ ಒಂದರೆಡು ಪ್ಯಾರಾಗಳು ಏನೂ ಅನಿಸುವುದಿಲ್ಲ. ಓದು ಮುಂದೆ ಸಾಗಿದಂತೆ, ಕಾಡು ಪ್ರಾಣಿಗಳ ಜೀವನ ಶೈಲಿ ಆಶ್ಚರ್ಯಗೊಳಿಸುತ್ತದೆ, ಏಕೆಂದ್ರೆ, ಪ್ರಾಣಿಗಳು ಆಡುವ ಮಾತು-ಕಥೆಗಳು ನಮ್ಮ-ನಿಮ್ಮ ದೈನಂದಿನ ಜೀವನದಲ್ಲಿ ಇರುವ ಹಾಗೇನೆ ಸಂಭಾಷಣೆಗಳಿವೆ. ಹಾಗಾಗಿ, ಕಾಂಬರಿಯ ಮೊದಲ ಅಧ್ಯಾಯ ನಿಮ್ಮನ್ನ ದಟ್ಟ ಕಾಡಿನ ದರುಶನ ಮಾಡಿಸುತ್ತಲೇ ಮುನ್ನಡೆಯುತ್ತದೆ...

ಇದರೊಟ್ಟಿಗೆ ಕಾಡು ಪ್ರಾಣಿಗಳಾದ ಗಂಭೀರ-ರಾಜ (ಸಿಂಹ), ಗಜೇಂದ್ರ-ಮಂತ್ರಿ (ಆನೆ), ಕರಿಯ-ಕಾಡು ಕೋಣಗಳ ನಾಯಕ , ಹನುಮ-ಕೋತಿಗಳ ನಾಯಕ, ಮನೋಹರ - ಸಾರಂಗಳ ನಾಯಕ, ಭೈರವ-ಕಾಡಿನ ಕ್ರೂರ ಹುಲಿ, ರಾಮಸೇವಕ (ಅಳಿಲು), ಭೂಪತಿಯ-ಆನೆಗಳ ನಾಯಕ, ನವನೀತ-ಪಕ್ಷಿಗಳ ನಾಯಕ, ಚತುರ- ನರಿಗಳ ನಾಯಕ. ಈ ರೀತಿ ನಮ್ಮ ನಡುವಿನ ನಾಯಕರ ಕಲ್ಪನೆಯೂ ಇಲ್ಲಿ ಬಂದು ಹೋಗುತ್ತದೆ....

ಆದ್ರೆ, ಲೇಖಕರು ಪ್ರಾಣಿಗಳ ಬಗೆಗಿನ ಸಣ್ಣ ಕಥೆಗಳನ್ನೇ ಬರೆಯಲು ಕುಳಿತಿದ್ದರಂತೆ. ಪಾತ್ರಗಳು ಇವರಿಂದ ಕಾದಂಬರಿಯನ್ನೇ ಬರೆಸಿಹಾಕಿವೆ. ಕಾರಣ, ಕಥೆಯಲ್ಲಿ ಬರುವ ಪ್ರತಿ ಪಾತ್ರವೂ ಒಂದೊಂದು ಕಥೆ ಹೇಳುತ್ತವೆ. ಅವುಗಳ ಸುತ್ತಣ ಬದುಕನ್ನು ನಿರೂಪಿಸಿಬಿಡ್ತವೆ. ಹಾಗಾಗಿ, "ಯಾರೂ ಅರಿಯದ ವೀರರು" ಕಾದಂಬರಿಯಲ್ಲಿ ಅಧ್ಯಾಗಳ ಸೃಷ್ಟಿಯಾಗಿದೆ. ಒಂದೊಂದು ಅಧ್ಯಾಯವೂ ಪ್ರಾಣಿಗಳ ಜೀವನದ ಮೇಲೆ ಬೆಳಕು ಚೆಲ್ಲುತ್ತಲೇನೇ ಕಾಡಿನ ಕಥೆ ಹೇಳುತ್ತವೆ...

ಕಥೆಯಲ್ಲಿ ಕೇವಲ ಪ್ರಾಣಿ ಪಕ್ಷಿಗಳಿಲ್ಲ. ಅರಣ್ಯ ನಾಶ ಮಾಡುವ ಮನುಷ್ಯರೂ ಬಂದು ಹೋಗುತ್ತಾರೆ. ಅದರಿಂದ ಪ್ರಾಣಿಗಳಿಗೆ ಆಗುವ ಅನಾಹುತಗಳ ಅನಾವರಣವೂ ಇಲ್ಲಿ ಆಗುತ್ತದೆ. ಕಾಡ ಬಿಟ್ಟು ನಾಡಿಗೆ ಪ್ರಾಣಿಗಳು ಏತಕ್ಕೆ ಬರುತ್ತವೆಂಬ ಸತ್ಯವೂ ಕಾದಂಬರಿಯಲ್ಲಿ ವ್ಯಕ್ತವಾಗುತ್ತವೆ...ಪ್ರಾಣಿಗಳನ್ನ ಉಳಿಸಿ..ಕಾಡು ಬೆಳಸಿ ಅನ್ನೋ ಸಂದೇಶವೂ ಕಥೆಯ ಮೂಲಕ ಆಗಾಗ ಮನತಟ್ಟುವಂತೆ ಹೇಳುವ ಪ್ರಯತ್ನವೂ ಆಗುತ್ತದೆ...

ತಿರುಮಲೆ ಎಂ.ಎಸ್.ರಾಮಮೂರ್ತಿಯವರ ಈ ಎರಡನೇ ಕೃತಿಯನ್ನ ನವರಸ ಕನ್ನಡ ಪ್ರಕಾಶನವರು ಪ್ರಕಟಿಸಿದ್ದಾರೆ. ೧೦೦ ರುಪಾಯಿ ಬೆಲೆಯ ಕಾದಂಬರಿ ಸುಮಾರು ೫೨ ಅಧ್ಯಾಗಳನ್ನ ಹೊಂದಿದೆ. ಚಿಕ್ಕ ಚಿಕ್ಕ ಕಥೆಯ ಈ ಪುಸ್ತಕ ಓದಿಸಿಕೊಂಡು ಹೋಗುತ್ತದೆ..ಓದಿ ನೋಡಿ...ನಿಮಗೂ ಅನಿಸುತ್ತದೆ...

- ರೇವನ್ ಪಿ.ಜೇವೂರ್

Saturday, August 7, 2010

ಸಾಯಿ ಶಕ್ತಿ...

ನಿರ್ದೇಶಕ ಸಾಯಿ ಪ್ರಕಾಶ್. ಸಾವಿನ ಸಮೀಪಕ್ಕೆ ಹೋಗಿ ಬಂದವರು. ಸಾವಿನ ಬೆಲೆ ಅರ್ಥವಾಗುವ ಹೊತ್ತಿಗೆ. ತಮ್ಮ ನಿರ್ಧಾರ ತಪ್ಪೆಂದು ಬೇಗ ಚೇತರಿಸಿಕೊಂಡ್ರು. ಸಾಲ..ಸೂಲಗಳ ಮಧ್ಯೆ ಆತ್ಮ ಹತ್ಯೆಯ ಧೈರ್ಯ ಮಾಡಿದ್ದು ಈಗ ಹಳೆ ಕಥೆ. ಹೊಸ ಶಕ್ತಿಯೊಂದು ಇವರಲ್ಲಿ ಮೂಡಿದೆ. "ನಾಗಶಕ್ತಿ"ಯ ಮೇಲಿನ ನಂಬಿಕೆ ಇವರನ್ನ ಮತ್ತೆ ಕಥೆ ಮಾಡಲು ಕುಳ್ಳಿರಿಸಿದೆ. ಜೀವನದ ತಪ್ಪು-ಒಪ್ಪುಗಳನ್ನ ಸರಿ ಮಾಡಿಕೊಳ್ಳಲು ನಾಗದೇವರ ಮೊರೆ ಹೋಗಿದ್ದಾರೆ. ಅವರ ಆಸೆಗೆ ಯಾರೂ ಒಲ್ಲೆ ಅಂದಿಲ್ಲ. ನಾಗಶಕ್ತಿಗೆ ಕನ್ನಡದ ಕಲಾವಿದರೆಲ್ಲ ಶಕ್ತಿನೇ ಆಗಿದ್ದಾರೆ...

ಸಾಯಿ ಪ್ರಕಾಶ್ ಸರಿ ಸುಮಾರು ೮೦ ಚಿತ್ರಗಳನ್ನ ನಿರ್ದೇಶಿಸಿದ್ದಾರೆ. ನೂರು ಚಿತ್ರಗಳನ್ನ ನಿರ್ದೇಶನ ಮಾಡಲೇಬೇಕೆಂದು ಫೈನಲ್ ಇನ್ನಿಂಗ್ಸ್ ನಲ್ಲಿ ಮತ್ತೆ ಉತ್ಸುಕರಾಗಿದ್ದಾರೆ. ಅದರ ಫಲವೇ "ಶ್ರೀನಾಗಶಕ್ತಿ" ಕಥೆ ಸಿದ್ಧವಾಗಿದೆ. ಕಥೆ ಕೇಳಿದಾಕ್ಷಣ ಚಿತ್ರ ನಿರ್ಮಿಸಲು ನಟಿ ಚಂದ್ರಿಕಾ ಮುಂದೆ ಬಂದಾಗಿದೆ. ನಾಯಕಿ ಶ್ರುತಿಯೂ ಅಷ್ಟೆ. ರಾಷ್ಟ್ರಪ್ರಶಸ್ತಿ ತಂದುಕೊಟ್ಟ ನಿರ್ದೇಶಕರ ಕರೆಗೆ ಪ್ರೀತಿಯಿಂದ ಬಂದಾಗಿದೆ. ಜೊತೆಗೆ ತಂಗಿ ಮಗಳು ಕೃತಿಯನ್ನ ಕರೆತಂದಿದ್ದಾರೆ. ನಾಯಕ ರಾಮಕುಮಾರ್ ಸಹ ಇದಕ್ಕೆ ಹೊರತಾಗಿಲ್ಲ. ಸಾಯಿಯವರಿಗೆ ಒಳ್ಳೆಯದಾಗಲೆಂದು ಮತ್ತೊಂದು ಭಕ್ತಿ ಪ್ರಧಾನ ಚಿತ್ರಕ್ಕೆ ನಾಯಕರಾಗಲು ಒಪ್ಪಿಕೊಂಡಿದ್ದಾರೆ.

"ಶ್ರೀನಾಗಶಕ್ತಿ" ಶೃದ್ಧಾ,ಭಕ್ತಿ,ನಂಬಿಕೆ, ಈ ಮೂರು ಅಂಶಗಳನ್ನ ಆಧರಿಸಿದ ಚಿತ್ರ. ಎಲ್ಲ ಕಾಲಕ್ಕೂ ಧೈವಿ ಭಕ್ತಿ ಬೇಕೆ..ಬೇಕು ಅನ್ನೊ ಸಣ್ಣದೊಂದು ನಂಬಿಕೆ ಮೇಲೆ ಸಾಯಿ ಪ್ರಕಾಶ್ ನಾಗಶಕ್ತಿ ಕಥೆ ಹೆಣೆದಿದ್ದಾರೆ. ದುಡ್ಡು ಹಾಕಿದ ಚಂದ್ರಿಕಾ ಅವರಿಗೂ ಒಂದು ಪಾತ್ರ ಕೊಟ್ಟಿದ್ದಾರೆ. ನಾಗರಾಜ..ನಾಗರಾಣಿಯ ಎರಡು ಪ್ರಮುಖ ಕ್ಯಾರೆಕ್ಟರ್ ನಲ್ಲಿ ಚಂದ್ರಿಕಾ ನಾಗರಾಣಿ, ನಾಗರಾಜನ ಪಾತ್ರವನ್ನ ನಟ ಅಭಿಜಿತ್ ಮಾಡ್ತಾಯಿದ್ದಾರೆ.

ಕುಕ್ಕೆ ಸುಬ್ರಮಣ್ಯ, ನಂದಿಗ್ರಾಮ, ಬೆಂಗಳೂರುಗಳಲ್ಲಿ "ಶ್ರೀನಾಗಶಕ್ತಿ" ಚಿತ್ರೀಕರಣಗೊಳ್ಳಿದೆ. ಈ ಮೊದಲಿನ ಚಿತ್ರಕ್ಕೆ ಬಳಸಿದ ಗ್ರಾಪಿಕಲ್ ಸ್ಪರ್ಶ ಇಲ್ಲೂ ಇರುತ್ತದೆ. ಗ್ರಾಮದೇವತೆ, ನಾಗದೇವತೆಗಳಂತಹ ಚಿತ್ರಗಳಿಗೆ ಅತೀ ಹೆಚ್ಚು ಗ್ರಾಫಿಕ್ ಉಪಯೋಗಿಸಲಾಗಿತ್ತು. ಆದ್ರೆ, "ಶ್ರೀನಾಗಶಕ್ತಿ"ಯಲ್ಲಿ ಹಾಗಿಲ್ಲ. ಎಲ್ಲಿಬೇಕೋ...ಅಲ್ಲಿ ಗ್ರಾಫಿಕ್ ಬಳಕೆ ಆಗಲಿದೆ. ಬರುವ ಮೂರು
ತಿಂಗಳಲ್ಲಿ ಚಿತ್ರ ಸಿದ್ಧಗೊಳ್ಳುವಂತೇನೆ ಸ್ಕೆಡ್ಯೂಲ್ ಮಾಡಲಾಗಿದೆ. ಸಾಯಿಯವರ ಈ ಹೊಸ ಶಕ್ತಿ ಹೊಸ ಚಿತ್ರ ಮಾಡಲು ಇನ್ನಷ್ಟು ಶಕ್ತಿ ನೀಡಲಿ..
- ರೇವನ್ ಪಿ.ಜೇವೂರ್