Friday, September 24, 2010

ಹ್ಯಾರಿ ಪಾಟರ್ ಅಂತ್ಯ...

ಹ್ಯಾರಿ ಪಾಟರ್ ಕಥೆ ಈಗ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಸರಿ ಸುಮಾರು ೬ ಚಿತ್ರಗಳು ಹ್ಯಾರಿ ಪಾಟರ್ ಸರಣಿ ಕಥೆ ಮೇಲೆ ಬಂದು ಹೋಗಿವೆ. ಎಲ್ಲರಿಗೂ ಗೊತ್ತಿರುವಂತೆ ಪುಟ್ಟ ಹ್ಯಾರಿ ಪ್ರತಿ ಮಕ್ಕಳ ಮನಸ್ಸಿನಲ್ಲಿ ಜಾಗ ಮಾಡಿಕೊಂಡಿದ್ದಾನೆ. ತನ್ನ ಕಥೆ ಬೆಳೆದಂತೆ ತೆರೆ ಮೇಲಿನ ಡ್ಯಾನಿಯಲ್ ರಾಡ್ ಕ್ಲಿಪ್ ಸಹ ಬೆಳಯುತ್ತಲೇ ಬಂದಿದ್ದಾನೆ. ಅದೇ ರೀತಿನೇ ಸದ್ಯ ಕಥೆ ಅಂತ್ಯ ಕಾಣುತ್ತಿದೆ...


ಚಿತ್ರದ ಈ ಭಾಗದಲ್ಲಿ ಹ್ಯಾರಿ ಪಾಟರ್ ದೊಡ್ಡವನಾಗಿದ್ದಾನೆ. ಮಹಾ ಬಲಶಾಲಿಯೂ ಹೌದು. ಆದ್ರೆ, ದುರಂತವೆಂದರೆ ಹ್ಯಾರಿಗೆ ಮ್ಯಾಜಿಕ್ ಕಲಿಸಿಕೊಟ್ಟ ಗುರು ಸತ್ತು ಹೋಗಿದ್ದಾನೆ. ಹ್ಯಾರಿ ಪಾಟರ್ ನ ಶಕ್ತಿ ಕಸಿದುಕೊಳ್ಳಲು ಬರುತ್ತಲೇ ಇದ್ದ ಆ ಎಲ್ಲ ವಿಲನ್ ಗಳಿಗೆ ಒಂಚೂರು ಶಕ್ತಿ ಜಾಸ್ತಿಯಾಗಿದೆ. ಮುಪ್ಪು ಕೂಡ ಆವರಿಸಿಕೊಂಡಿದೆ. ಆದ್ರೂ, ಶಕ್ತಿಮೀರಿ ಯುವ ಹ್ಯಾರಿಯನ್ನ ಹೊಸೆದು ಹಾಕುವ ಪ್ಲಾನ್ ಹಾಕಿಕೊಂಡಿದ್ದಾರೆ. ...

ಆದ್ರೆ, ಹ್ಯಾರಿ ಈ ಕಥೆಯ ಅಂತ್ಯ ದೊಡ್ಡದಾಗಿಯೇ ಇದೆ. ಕೇವಲ ಒಂದೇ ಒಂದು ಭಾಗದಲ್ಲಿ ಅಂತ್ಯದ ಕಥೆ ಮುಗಿತಾಯಿಲ್ಲ. ಬರೊಬ್ಬರಿ ಎರಡು ಭಾಗದಲ್ಲಿ ಚಿತ್ರ ಬರುತ್ತಿದೆ. " ಹ್ಯಾರಿ ಪಾಟರ್ ಅಂಡ್ ಡೆತ್ಲಿ ಹೆಲ್ಲೊನ್"ನ ಭಾಗವೊಂದು ಇದೇ ಬರುವ ನವೆಂಬರ್ ೧೯ ಕ್ಕೆ ತೆರೆಗೆ ಬರಲಿದೆ. ಆದ್ರೆ, ಹ್ಯಾರಿ ಕಥೆಗೆ ಶಾಶ್ವತ ಅಂತ್ಯ ಹೇಳುವ ಸಿನೆಮಾ ೨೦೧೧ ಕ್ಕೆ ರಿಲೀಜ್ ಆಗಲಿದೆ.

ಹ್ಯಾರಿ ಪಾತ್ರಕ್ಕೆ ಜೀವ ತುಂಬಿದ ಅದೇ ನಟರೇ ಇಲ್ಲೂ ಮುಂದುವರೆದಿದ್ದಾರೆ. ಡ್ಯಾನಿಯಲ್ ರಾಡ್ ಕ್ಲಿಫ್ ಯುವ ಹ್ಯಾರಿಯಾಗಿ ಕಾಣಿಸಿಕೊಳ್ತಾಯಿದ್ದಾರೆ. ಎಮ್ಮಾ ವಾಟ್ಸನ್ ಹ್ಯಾರಿಯ ಗೆಳತಿಯಾಗಿ ಇದ್ದಾಳೆ. ಇವರಿಬ್ಬರ ಸ್ನೇಹಿತನ ಪಾತ್ರಧಾರಿ ರುಪರ್ ಗ್ರಿಂಟ್ ಎಂದಿನಂತೆ ಟು ಬಿ ಕಂಟಿನ್ಯೂಡ್ ಆಗಿದ್ದಾನೆ. ಸ್ಟೀವ್ ಕ್ಲೂಸ್ ಚಿತ್ರಕಥೆ ಇಲ್ಲೂ ಇದೆ. ಆದ್ರೆ, ನಿದೇಶನವನ್ನ ಈ ಕೊನೆಯ ಚಿತ್ರಕ್ಕೆ
ಡೆವಿಡ್ ಯಟ್ ಮಾಡಿದ್ದಾರೆ.

ಎರಡೂ ಚಿತ್ರಗಳು 3ಡಿ ಮತ್ತು 2ಡಿ ಯಲ್ಲಿ ಬರುತ್ತಿವೆ. ವಿಶೇಷವೆಂದ್ರೆ, ಈ ಚಿತ್ರಗಳ ಹೊರತಾಗಿ ಈ ಹಿಂದಿ ಸರಣಿ ಚಿತ್ರಗಳು 3ಡಿ ಬಂದಿರಲಿಲ್ಲ. ಇದು ಒಂದು ಹೊಸ ರೀತಿಯ ಪರಿಣಾಮ ಬೀರಲು ಹೊಸ ಎಫೆಕ್ಟ್ ನಲ್ಲಿ ಬಿಡುಗಡೆಯಾಗುತ್ತಿದೆ. ಹಾಗಾಗಿ ಹ್ಯಾರಿ ಪ್ರೇಮಿಗಳಿಗೆ ಯುವ ಹ್ಯಾರಿ ಹೊಸ ಅನುಭವ ನೀಡಲಿದ್ದಾನೆ ಅಂತಲೇ ಹೇಳಬಹುದು..

- ರೇವನ್ ಪಿ.ಜೇವೂರ್

Tuesday, September 21, 2010

ಗಾಂಧಿನಗರದಲ್ಲಿ ಉತ್ತರ ಕರ್ನಾಟಕ....

ನಾವ್ ಬಂದೇವ..ನಾವ್ ಬಂದೇವ...ಸಿನಿಮಾ ನೋಡಾಕ್. ಸಿನಿಮಾ ನೋಡಿ, ಚಿತ್ರಾ ಮಾಡಾಕ್. ನಾವ್ ಹಿಂಗ. ಸಿನಿಮಾದ ಹುಚ್ಚನ್ಯಾಗ್ ಖಬರ್ ಇಲ್ದಂಗ ಕೆಲ್ಸಾ ಮಾಡ್ತೀವಿ. ನಿಜಾರೀ....ಉತ್ತರ ಕರ್ನಾಟಕದ ಮಂದಿ ಹಿಂಗ...

ಕನ್ನಡ ಫಿಲ್ಮ್ ಇಂಡಸ್ಟ್ರೀಯಾಗ ಉತ್ತರ ಕರ್ನಾಟಕದ ಮಂದಿನ ಜಾಸ್ತಿ ಅದಾರ್. ಎಲ್ಯಾರ್ ಹೋಗ್ರಿ, ಖಡಕ್ ಮಾತಿನ ಮನುಷ್ಯ ಸಿಕ್ಕಬಿಡ್ತಾನ್. ತೆರೆ ಹಿಂದ ಹೋದ್ರಂತು ಮುಗಿತ್. ನಮ್ಮೂರ್ ಬಿಜಾಪುರ್. ನಮ್ಮೂರ್ ಹುಬ್ಬಳಿ ಅನ್ನೋ ಹುಡುಗ್ರು ಸಿಕ್ಕ ಬಿಡ್ತಾರೆ. ಅದೇನ್ ಚಟಾನೋ ಏನ್. ಸಿನಿಮಾ ಹುಚ್ಚಿನ ಮಂದಿ ಸೀದಾ ಯಾವುದಾರ ಕೆಲ್ಸಕ್ಕ ಬಂದ ಬಿಡ್ತಾರೆ....

ಈಗ ಪರದೆ ಮ್ಯಾಲ್ ಕಾಣು ಮಂದಿನೂ ಹೆಚ್ಚ ಆಗ್ಯಾರ್. ಆದ್ರ, ಹಂಗ ಬಂದ ಜನಕ್ಕ ಇಲ್ಲಿ ಹೆಚ್ಚ್ ಹಾಸ್ಯ ಪಾತ್ರಾನಾ ಸಿಕ್ತಾವು. ಉತ್ತರ ಕರ್ನಾಟಕದ ಮಾತು ಬೆಂಗಳೂರ್ ಮಂದಿನ ನಗುಸ್ತಾವು. ಅದ ರೀತಿ ಕಾಡ್ಸು ಹಂಗ ಮಾಡ್ತಾವು. ರಾಜು ತಾಳಿಕೋಟಿ ಮಾತ್ ಕೇಳಿ ಅದೆಷ್ಟ ಜನ ನಗುದಿಲ್ಲ ಹೇಳ್ರಿ. 'ಮನಸಾರೆ" ಫಿಕ್ಚರ್ ನ್ಯಾಗಂತು ನಗುದ್ ನಗುದ್. "ಪಂಚರಂಗಿ" ನೂ ಹಂಗ ಐತಿ...

ಮತ್ತೊಂದ್ ಮದುವೇನಾ..! ಅನ್ನೊ ಚಿತ್ರದಾಗ ರಾಜು ನಗಸಾಕ ಮತ್ತ ಸಜ್ಜ. ಆದ್ರೆ, ಇದ ಹಾಸ್ಯದ ಕತೀ ಆತ್. ಹೀರೋ ಆಗು ಹುಡುಗ್ರು ಬರಾಕುಂತಾರ್. "ಗವಿಪುರ' ಅನ್ನೊ ಸಿನಿಮಾದ ಹೀರೊ ಸುರಜ್ ಧಾರವಾಡ ಹುಡುಗ. ಆದ್ರ, ಇವರ ಊರು ಬಿಜಾಪುರ್ ಜಿಲ್ಲಾ ಸಾಸನೂರು. ಹೀರೋಯಿನ್ ರಾಣೆಬೆನ್ನೂರ್ ದಾಕಿ. ಆದ್ರೆ ಸೌಜನ್ಯ ಅನ್ನು ಈ ಕಪ್ಪ ಹುಡುಗಿ ಹುಟ್ಟಿದ ಬೆಂಗಳೂರ್. ಬೆಳದಿದ್ದ ಬೆಂಗಳೂರ್. ಹಂಗಾಗಿ ಅಳ್ ಹುರುದಂಗ ಇಂಗ್ಲೀಷ್ ಮಾತಾಡ್ತಾಳ. ತಲಿನೂವು ಆಗುವಂಗ ಒಟಾ..ಒಟಾನೂ ಅಂತಾಳ. ಆದ್ರೆ, ನೋಡಾಕ ಚೆಂದ ಅದಾಳ್. ಶಾಣೆನೂ ಅದಾಳ.. ಸಿನಿಮಾ ರೆಡಿ ಆದ್ ಮ್ಯಾಲ್ ನೋಡಬೇಕ ಇವರ ಆಟ...

ಇವರಂಗ ಇನ್ನು ಬಾಳ ಮಂದಿ ಬರಾಕುಂತಾರ. ಆದ್ರ ಅದೃಷ್ಟಾ ಯಾರಿಗೈತೋ ಏನೊ. ಬಿಳಿ ಪರದೆ ಮ್ಯಾಲ್ ಮಿಂಚಾಕ ಹುಬ್ಬಳಿ ಮಂದಿ 'ದ್ರೋಹಿ' ಅನ್ನು ಚಿತ್ರಾ ಮಾಡ್ಯಾರ್ ಇವರ ಕತಿ ಏನ್ ಐತೋ ಏನೋ..ರೊಕ್ಕಾ ಹಾಕಿ ಗೆಲ್ಲು ಲೆಕ್ಕಾ ಮಾಡ್ಯಾರ್. ಇವರನ್ನ ಸಿದ್ಧರೂಢರ ಕಾಯಬೇಕು..

-ರೇವನ್ ಪಿ.ಜೇವೂರ್

Monday, September 20, 2010

ಹಳದಿ ಬೂಟಿನ ಹುಡುಗಿ...

ಹಳದಿ ಬೂಟಿನ ಹುಡುಗಿ. ಮುಂಬೈಗೆ ಬಂದು ಅದ್ಯಾವಾಗಲೋ ಆಗಿದೆ. ಈಗ ಆ ಕಥೆ ಹೊರಬಿದ್ದಿದೆ. ಹೌದು..! ನಿರ್ದೇಶಕ ಅನುರಾಗ್ ಕಶ್ಯಪ್ ಮುಂಬೈನ ಸತ್ಯ ಘಟನೆ ಮೇಲೆ ಒಂದು ಚಿತ್ರ ಮಾಡಿದ್ದಾರೆ. "ದಟ್ ಗರ್ಲ್ ಇನ್ ಯಲೋ ಬೂಟ್ಸ್" ಅನ್ನೊ ಈ ಚಿತ್ರದಲ್ಲಿ ಹಳದಿ ಬೂಟ್ ಧರಿಸಿದ ಯುವತಿಯ ಕರಾಳ ಕಥೆಯ ನೋವಿದೆ. ಜರ್ಮನ್ ದಿಂದ ಬಂದ ಈಕೆಯ ಕಥೆ ನಿಜಕ್ಕೂ ಸಂಕಟ ತರುತ್ತದೆ. ಮುಂಬೈನಂತಹ ಹೊಲಸು ಜಗತ್ತಿನ ಕಾಮಪೀಪಾಸುಗಳು ಮುಗ್ಧ ಹುಡುಗಿಯ ಜೀವನದ ದಿಕ್ಕೇ ಬದಲಿಸಿ ಹಾಕಿದ್ದಾರೆ....

ಅದೆಲ್ಲೋ ಈ ಕಥೆ ಓದಿದ ನಿರ್ದೇಶಕ ಅನುರಾಗ್ ಕಶ್ಯಪ್ ಚಿತ್ರ ರೂಪ ಕೊಟ್ಟಿದ್ದಾರೆ. ಮುಂಬೈನ ಸಂದಿ-ಗೊಂದಿಗಳ ಜಾಲಾಡಿ ಅಲ್ಲಿ ಕೆಟ್ಟ ದಂಧೆಯ ಕ್ರೂರ ರೂಪವನ್ನ ಚಿತ್ರದಲ್ಲಿ ಯಥಾವತ್ತು ತೋರುವ ಪ್ರಯತ್ನ ಮಾಡಿದ್ದಾರೆ. ಮಸಾಜ್ ಪಾರ್ಲರ್ ಗಳಂತಹ "ದಂಧಾ" ಜಾಗಳಲ್ಲಿಯ ನೈಜ ಚಿತ್ರಣ ನೀಡುವ ಸಾಹಸವನ್ನೂ ತೋರಿದ್ದಾರೆ. ವಿದೇಶದಿಂದ ಭಾರತಕ್ಕೆ ಬರುವ ಪರದೇಶಿಗಳ ಪಾಡನ್ನ ಭಾರತಿಯರಿಗೆ ತಿಳಿಸಲು ಒಳ್ಳೆ ಪ್ಲಾನ್ ಮಾಡಿಕೊಂಡಿದ್ದಾರೆ...

ರೀಲ್ ಕಥೆಯಲ್ಲಿ ಬರುವ ಹುಡುಗಿ ಹೆಸರು ರುಥ್. ಅಪ್ಪನನ್ನ (ನಟ ನಾಸೀರುದ್ದೀನ ಷಾ ರನ್ನ) ಹುಡುಕಿಕೊಂಡು ಭಾರತಕ್ಕೆ ಬರುತ್ತಾಳೆ. ತನ್ನಪ್ಪ ಒಬ್ಬ ಫೋಟೋಗ್ರಾಫರ್ ಅನ್ನೋದು ಬಿಟ್ರೆ, ಪತ್ತೆ ಹಚ್ಚಲು ಬೇಕಾದ ಯಾವುದೇ ಮಾಹಿತಿಗಳಿಲ್ಲದೇನೆ ರುಥ್ ಮುಂಬೈಗೆ ಬಂದಿಳಿದು ಬಿಡ್ತಾಳೆ. ನಂತರ ಎಲ್ಲವೂ ಕರಾಳ..ಕರಾಳ. ಅಷ್ಟೊಂದು ಕೆಟ್ಟದಾಗಿ ಅತಿಥಿ ಸತ್ಕಾರ ಮಾಡುತ್ತದೆ ಮುಂಬೈ. ವಿದೇಶಿ ಎಂಬುವ ಒಂದೇ ಕಾರಣಕ್ಕೆ ರುಥ್ ಳನ್ನ ಎಲ್ಲರೂ ಸುಲಿದು ಬಿಡುತ್ತಾರೆ...ಸ್ನೇಹಿತನಂತೆ ಕಂಡ ವ್ಯಕ್ತಿಯೂ ದೇಹದ ವಾಂಛೆ ತೀರಿಸಿಕೊಂಡು ಬಿಡ್ತಾನೆ ....

ಇದೆನ್ನೆಲ್ಲ ನೋಡಲು ಚಿತ್ರ ಇನ್ನು ತೆರೆಗೆ ಬಂದಿಲ್ಲ. ಇದೇ ತಿಂಗಳ ತೆರೆಗೆ ಬರುವ ಸಾಧ್ಯೆತೆನೂ ಇದೆ. ಆದ್ರೆ, ಅದಕ್ಕೂ ಮುಂಚೆ "ದಟ್ ಗರ್ಲ್ ಇನ್ ಯಲೋ ಬೂಟ್ಸ್" ಟೊರೆಂಟೋ ಇಂಟರ್ ನ್ಯಾಷ್ನಲ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಉತ್ತಮ ಪ್ರತಿಕ್ರಿಯೆಯನ್ನೂ ಪ್ರೇಕ್ಷಕರು ನೀಡಿದ್ದಾರೆ. ಭಾರತೀಯರು ಈ ಚಿತ್ರ ನೋಡಿ ತಮ್ಮ ಮೈಂಡ್ ಸೆಟ್ ಬದಲಿಸಿಕೊಳ್ಳುತ್ತಾರೆಂಬ ಭಾರೀ ವಿಶ್ವಾಸವೂ ನಿದೇರ್ಶಕ ಕಶ್ಯಪ್ ಗಿದೆ.

ಇನ್ನೊಂದು ವಿಶೇಷತೆನೂ ಇಲ್ಲಿದೆ. ರುಥ್ ಪಾತ್ರದ ಹುಡುಗಿ ಬೇರೆ ಯಾರೂ ಅಲ್ಲ. ದೇವ್ ಡಿ ಚಿತ್ರದ ಅದೇ ಕಾಲ್ಕಿ ಕೋಚ್ಚಿನ್ ಇಲ್ಲಿ ಹಳದಿ ಬೂಟಿನ ಹುಡುಗಿ. ನೈಜ ಕಥೆಗೆ ನೈಜ್ ವಿದೇಶಿಯನ್ನೇ ನಿರ್ದೇಶಕ ಕಶ್ಯಪ್ ಆಯ್ಕೆ ಮಾಡಿಕೊಂಡಿದ್ದಾರೆ. ಆದ್ರೆ, ಕಾಲ್ಕಿ ಜರ್ಮನ್ ದಿಂದ ಬಂದವಳಲ್ಲ. ಬದಲಿಗೆ ಫ್ರೆಂಚ್ ಬ್ಯೂಟಿಯಿಕೆ. ಅದು ಹೇಗೆ ನಂಟು ಬೆಳೆಯಿತೋ ಏನೋ. ಅನುರಾಗ್ ಕಶ್ಯಪ್ ಜೊತೆಗೆ ಈ ಚೆಲುವೆ ಅನುರಾಗ ಸಂಗಮ ಬೆಳೆದು ಬಿಟ್ಟಿದೆ. ಬಾಲಿವುಡ್ ನಲ್ಲಿ ಇವರ ಮಧ್ಯೆದ ಅಫೇರ್ ಬಗೆಗಿನ ಕಥೆನೂ ಕೇಳಿ ಬರುತ್ತಿದೆ. ಹಾಗಂತ ಇದು ಅದೆಷ್ಟು ದಿನ ಉಳಿಯುತ್ತದೆಯೋ ಗೊತ್ತಿಲ್ಲ. "ದಟ್ ಗರ್ಲ್ ಇನ್ ಯಲೋ ಬೂಟ್ಸ್" ಚಿತ್ರ ಮನಸ್ಸಿನಲ್ಲಿ ಉಳಿಯೋದು ಗ್ಯಾರಂಟಿ. ಸೋ ವೇಟ್ ಫಾರ್ ಫಾರೆನ್ ಗರ್ಲ್...

- ರೇವನ್ ಪಿ.ಜೇವೂರ್

Saturday, September 11, 2010

ನಿಧಿ ಸುಬ್ಬಯ್ಯ ರಂಗು...

ಪಂಚರಂಗಿ ರಂಗು ರಂಗಾಗುತ್ತಿದೆ. ಚಿತ್ರದ ಕಥೆಯಲ್ಲಿ ಏನೂ ಇಲ್ಲ. ಆದ್ರೂ ಜನ ಚಿತ್ರ ಮಂದಿರದ ಕಡೆ ಓಡುತ್ತಿದ್ದಾರೆ. ಕಾರಣವೇನು. ಇದಂತು ಯಾರಿಗೂ ಗೊತ್ತಿಲ್ಲ. ಸಿಕ್ಕಾಪಟ್ಟೆ ಖಾರವಾಗಿ ವಿಮರ್ಶೆ ಮಾಡಿದ ಚಿತ್ರ ವಿಮರ್ಶಕರಿಗೂ "ಪಂಚರಂಗಿ" ಓಟದ ಗುಟ್ಟು ತಿಳಿದಂತಿಲ್ಲ. ವಿಮರ್ಶಗಳನ್ನ ನೋಡಿ ಚಿತ್ರ ನೋಡು ಮಂದಿ ಜಾಸ್ತಿ. ಇಲ್ಲಿ ವಿಮರ್ಶಗಳನ್ನು ಲೆಕ್ಕಿಸದೇನೆ ಚಿತ್ರ ನೋಡಲು ಜನ ಬರುತ್ತಿದ್ದಾರೆ. ಲೈಫು ಇಷ್ಟೇನೆ ಅನ್ನೋ ಭಟ್ಟರ ತತ್ವಗಳನ್ನ ಕೇಳಿ..ಕೇಳಿ ಬಿದ್ದು...ಬಿದ್ದು ನಗ್ತಾಯಿದ್ದಾರೆ...

ಆದರೆ, ಇಲ್ಲಿ ನಿಧಿ ರಂಗು ಹೆಚ್ಚಿದೆ. ನಟನೆಯಲ್ಲಿ ಪಕ್ವತೆ ಬಂದಿದೆ. ಆಫ್ ಸ್ಕ್ರೀನಲ್ಲಿ ಇರೋ ಥರವೇ ಆನ್ ಸ್ಕ್ರಿನಲ್ಲು ನಿಧಿ ನಗಿಸುತ್ತಾರೆ. ಅಳಿಸುತ್ತಾರೆ. ಸುಮ್ಮನಿದ್ದರೆ ಆಗಾಗ ಕಚಗುಳಿ ಇಡ್ತಾರೆ. ಅಷ್ಟೊಂದು ಚಂದದ ಅಭಿನಯವನ್ನ ಭಟ್ಟರು ನಿಧಿಯಿಂದ ತೆಗೆದಿದ್ದಾರೆ.
ಇದನ್ನ ನೋಡಿ ಬಹುತೇಕರಿಗೆ ನಿಧಿ ಮೇಲೆ ಭರವಸೆ ಬಂದಿದೆ. ಅಷ್ಟೇ ಪ್ರೀತಿನೂ ಬಂದಿದೆ. ಹಾಗಾಗಿ, ಕಾಲ್ ಮಾಡಿ "ನಿಧಿ ನಿನ್ನ ಅಭಿನಯ ಸೂಪರ್" ಅಂತ ಎಲ್ಲರೂ ಹೇಳ್ತಿದ್ದಾರೆ..

ಇದೇನೋ ಸಾಮಾನ್ಯ ಪ್ರೇಕ್ಷಕರ ಪ್ರತಿಕ್ರಿಯೆ. ಚಿತ್ರದಲ್ಲಿ ಪಾತ್ರ ನಿರ್ವಹಿಸಿದ ಅನಂತ್ ನಾಗ್ ಗೆ ನಿಧಿ ಅಭಿನಯ ಇಷ್ಟವಾಗಿದೆ. ಚಿತ್ರ ನೋಡಿದ ಮರುದಿನವೇ ಪ್ರೆಸ್ ಮೀಟ್ ನಲ್ಲಿ ನಿಧಿಯನ್ನ ಅನಂತ್ ತುಂಬಾನೆ ಹೊಗಳಿದರು. ಬರೊಬ್ಬರಿ ೧೫ ನಿಮಿಷ ನಿಧಿ ಅಭಿನಯದ ಬಗ್ಗೆ ಮಾತನಾಡಿದ್ದಾರೆ. ಮೆಚ್ಚುಗೆ ವ್ಯಕ್ತಪಡಿಸಿ, ಪುಟ್ಟ ಮಗಳಂತೆ ಅಪ್ಪಿ-ತಬ್ಬಿ ಮುದ್ದಿನಿಂದ ಸಂತಸ ಹೇಳಿಕೊಂಡ್ರು..

ಚಿತ್ರದಲ್ಲಿ ನಿಧಿ 'ಅಂಬಿಕಾ' ಅನ್ನೊ ಪಾತ್ರದಲ್ಲಿದ್ದಾರೆ. ಅಮ್ಮ ಇಲ್ಲ. ಅಪ್ಪ ಇಲ್ಲ. ಚಿಕ್ಕಪ್ಪ,ಚಿಕ್ಕಮ್ಮನ ಮನೆಯಲ್ಲಿಯೆ ಈಕೆಯ ವಾಸ. ಚಿಕ್ಕುಸ್ ಅಂತ ತರ್ಲೆ ಮಾಡ್ತ ಓಡಾಡುವ ಮಗಳು ಇವಳು. ತುಂಟಾಟ, ಮಂಗನಾಟ, ರಮ್ಯ ಬಾರ್ನಾ ಜೊತೆಗೆ ಕಿತ್ತಾಟ. ಇವುಗಳನ್ನ ಮಾಡ್ತಾನೆ ಇರುವ ಅಂಬಿಕೆ ಇವಳು. ಮನೆಯಲ್ಲಿ ಒಬ್ಬಳು ನೆಚ್ಚಿನ ಮಗಳು ಇದ್ದರೆ ಹೇಗಿರುತ್ತಾಳೋ. ಹಾಗೆ ನಿಧಿ ಪಂಚರಂಗಿಯಲ್ಲಿ ಫೀಲ್ ಆಗ್ತಾಳೆ.

ಅಂಬಿಕಾಳ ಪ್ರೀತಿಯ ನಿವೇದನೆ ಇಲ್ಲಿ ಇನ್ನು ಚೆಂದ. ಮನಸ್ಸಿನಲ್ಲಿಯ ಮಾತುಗಳನ್ನ ಹಂಗಂಗೇ ಹೇಳಿಬಿಡುವ ಹುಡುಗಿ ಈಕೆ. ನಿಧಿಯ ಗೆಟಪ್ ಕೂಡ ಮುದ್ದು..ಮುದ್ದಾಗಿದೆ. ಆ ಕಾರಣಕ್ಕೂ ನಿಧಿ ಇಷ್ಟವಾಗ್ತಾಳೇ ಅಂತ ಹೇಳಬಹುದು. ಪಂಚರಂಗಿಯಲ್ಲಿ ನಿಧಿ ರಂಗು ನಿಜಕ್ಕೂ ಇಷ್ಟವಾಗ್ತದೆ. ನೀವೊಮ್ಮೆ ನೋಡಿ..

-ರೇವನ್ ಪಿ.ಜೇವೂರ್

Friday, September 10, 2010

ಗಣಪತಿ ನೀ ನನಗೆ ಅಪಾರ...

ಗಣೇಶ ನೀ ನೆನಗೆ ಹೆಚ್ಚು.
ಬರೊಬ್ಬರಿ ೭ ವರ್ಷ ನಿನ್ನನಿಟ್ಟು ಪೂಜಿಸಿದೆ.
ಗೆಳೆಯರೊಟ್ಟಿಗೆ ಸಾರ್ವಜನಿಕವಾಗಿ ಪೂಜಿಸಿದೇವು.
ಅದರ ಫಲ ನಾನು ಈಗ ಒಂದು ಮಟ್ಟಕ್ಕೆ ಬಂದು
ನಿಂತಿದ್ದೇನೆ.

ನಿನ್ನ ಪೂಜಿಸುವಾಗ ಒಂದು ನಂಬಿಕೆಯಿತ್ತು.
ಜೀವನದಲ್ಲಿ ಏನೋ ಆಗುತ್ತೆ ಭಾರಿ ಬದಲಾವನೆಯಂದು.
ಅದು ಈಗ ಆಗ್ತಾಯಿದೆ. ಅಂದುಕೊಂಡ ಹುಡುಗಿ
ಜೀವನಕ್ಕೆ ಕಾಲಿಟ್ಟಾಗಿದೆ. ಪ್ರೀತಿಯಿಂದ ಮಾಡುವ
ಕೆಲಸವೂ ಸಿಕ್ಕಿದೆ.

ಸಾಕಪ್ಪ ಇಷ್ಟು ಅನ್ನುವ ಸಂಬಳವೂ ಇದೆ.
ತಿನ್ನಲು ಕೊರತೆಯಿಲ್ಲ. ಕೊರಗಲು ಮನೆಯಲ್ಲಿ
ಜಾಗವೇಯಿಲ್ಲ. ಪ್ರೀತಿ ತುಂಬಿದೆ. ಸ್ನೇಹ ಹೆಚ್ಚುತ್ತಿದೆ.
ನಿನ್ನ ನೆನಪೂ ಆಗುತ್ತಿದೆ.

ಗಣೇಶ ನೀ ನನಗೆ ಅಪಾರ..ಹೀಗೆ ಇರು ನನ್ನೊಟ್ಟಿಗೆ
ನಿನ್ನ ಪೂಜಿಸುವ ಮನದಲ್ಲಿ. ನನ್ನ ಬಾಲ ಗಣೇಶ...

-ರೇವನ್