Friday, November 18, 2011

ವಿಜೈಹೋ ಪ್ರಕಾಶ್...

ಮನೆಯೇ ಮೊದಲ ಸಂಗೀತ ಶಾಲೆ...
ಎಲ್ಲಿ ನೋಡಿದ್ರೂ ಸಂಗೀತದ ನಾದದ್ದೇ ಅಲೆ. ಅಮ್ಮ ಹಾಡುಗಾರ್ತಿ. ಅಪ್ಪ ದೊಡ್ಡ ಗಾಯಕ. ಅಜ್ಜ ಏನೂ ಕಮ್ಮಿಯಿರಲಿಲ್ಲ. ಶಾಸ್ತ್ರೋಕ್ತವಾಗಿ ಅಜ್ಜನೂ ಶಾಸ್ತ್ರೀಯ ಸಂಗೀತ ಕಲೆತಿದ್ರು. ಅಷ್ಟೆ. ಇನ್ನೇನು ಬೇಕು. ಮನೆಯಲ್ಲಿ ಸಂಗೀತದ್ದೇ ವಾತಾವರಣ.. ಬಾಲ್ಯದಲ್ಲಿಯೇ ಸಂಗೀತ ಸ್ವರಗಳ ಅಭ್ಯಾಸ ಶುರುವಾಗಿತ್ತು. ಹಾಗೆ ಸಂಗೀತ ಅಭ್ಯಾಸ ಮಾಡಿದವ್ರು ಅದು ಬೇರೆ ಯಾರು ಅಲ್ಲ..
ಜೈ ಹೋ ಖ್ಯಾತಿಯ ಗಾಯಕ ವಿಜಯ್ ಪ್ರಕಾಶ್.. ಮೊನ್ನೆ ಬೆಂಗಳೂರಿಗೆ ಬಂದಿದ್ರು. ಆಗಲೇ ತಮ್ಮ ಬದುಕಿನ ಸಂಗೀತ ಪಯಣ ಪುಟಗಳನ್ನ ತಿರುವಿ ಹಾಕಿದ್ರು..

ವಿಜಯ್ ಪ್ರಕಾಶ್ ತಕ್ಷಣಕ್ಕೆ ಕನ್ನಡಿಗರು ಅನಿಸೋದಿಲ್ಲ. ಉತ್ತರ ಭಾರತದ ಅದ್ಯಾವುದೋ ಊರಿನವರು ಅನಿಸುತ್ತಾರೆ. ಒಂದೊಮ್ಮೆ ಗಾಯಕ ಶ್ಯಾನ್ ತರವೂ ಕಾಣಿಸುತ್ತಾರೆ. ಆದ್ರೆ, ವಿಜಯ್ ಪ್ರಕಾಶ್ ಅಪ್ಪಟ ಕನ್ನಡಿಗರು. ಮೈಸೂರಲ್ಲಿ ಹುಟ್ಟಿ ಬೆಳೆದವರು. ತಿಳುವಳಿಕ ಬರೋವರೆಗೂ ಮೈಸೂರಲ್ಲಿಯೇ ಉಳಿದವರು. ೨೦ ನೇ ವಯಸ್ಸಿಗೆ ಸಂಗೀತದಲ್ಲಿಯೇ ಸಾಧಿಸಬೇಕು...ಸಂಗೀತದಲ್ಲಿಯೇ ಬೆಳೆಯ ಬೇಕೆಂದು ಮುಂಬೈ ಕಡೆಗೆ ಮುಖ ಮಾಡಿದ್ರು. ಅಲ್ಲಿಯೇ ಏಕೆ ಹೋದ್ರೋ ಏನೋ..

ಮುಂಬೈನಗರಿ ಯುವ ವಿಜಯ್ ರನ್ನ ಸ್ವಾಗತಿಸಿತು. ಅದು ಸಾ.ರೆ.ಗಾ.ಮ.ಪ ಸಂಗೀತ ವೇದಿಕೆ ಮೂಲಕ. ಖಾಸಗಿ ವಾಹಿನಿ ಸೋನಿಯಲ್ಲಿ ಯುವ ಪ್ರತಿಭೆಗಳನ್ನ ಹುಡುಕೋ ಈ ಕಾರ್ಯಕ್ರಮದಲ್ಲಿ ವಿಜಯ್ ಗೆ ಹಾಡೋ ಅವಕಾಶ್ ಸಿಕ್ಕಿತು. ಹಿಂದಿ ಬಾರದೆ ಇದ್ದರೂ ಅದನ್ನ ಕಲಿತು ಹಿಂದಿ ಹಾಡುಗಳನ್ನೇ ಹಾಡಿದ್ರು. ಕನ್ನಡದ ಒಂದು ಗೀತೆಯನ್ನ ಮುಂಬೈಯಲ್ಲಿ ಹಾಡಿದ್ರು. ಆಗಲೇ..ವಿಜಯ್ ಒಂಚೂರು ಗುರುತಿಸಿಕೊಂಡ್ರು...

ಬಳಿಕ ಸಾಗಿದ ಪಯಣ ದೊಡ್ಡದು. ಸಂಗೀತದಲ್ಲಿಯೇ ಹೆಸರು ಮಾಡಬೇಕಂದು ಬಂದ ವಿಜಯ್ ಪ್ರಕಾಶ್ ಗೆ ಜಾಹೀರಾತು ಕ್ಷೇತ್ರ ಕೈ ಬೀಸಿ ಕರೆಯಿತು. ಯಾಕೆಂದ್ರೆ, ವಿಜಯ್ ಕಂಠ ಸಿರಿ ಅಷ್ಟು ಅದ್ಭುತವಾಗಿದೆ. ಗಡಸು ಧ್ವನಿಯ ವಿಜಯ್ ಮಾತನಾಡಲು ಶುರು ಮ ಮಾಡಿದ್ರೆ ಸಾಕು. ಡಿಜಿಟಲ್ ಸೌಂಡ್ ನ ಅನುಭವವಾಗುತ್ತದೆ. ಅಂತಹ ಗಟ್ಟಿ ಧ್ವನಿಯ ವಿಜಯ್ ಪ್ರಕಾಶ್ ಸುಮಾರು ೮ ಸಾವಿಕ್ಕೂ ಹೆಚ್ಚು ಜಾಹೀರಾತುಳಿಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಇದರ ಜೊತೆಗೆ ಜಾಹೀರಾತು ಮಂದಿಗೆ ವಿಜಯ್ ಒಬ್ಬ ಗಾಯಕ ಎಂಬ ಸತ್ಯವೂ ಗೊತ್ತಾಯಿತು. ಆಗ ಜಿಂಗಲ್ಸ್ ಮಾಡಿಕೊಂಡೆಂಬ ಕೋರಿಕೆಗಳೂ ಬಂದವು. ಹಾಗೆ ಸಂಗೀತದ ಜೀವನ ಮುಂಬೈಯಲ್ಲಿ ಗಟ್ಟಿಯಾಗುತ್ತಲೇ ಹೋಯಿತು....

ಹಿಂದಿ ಚಿತ್ರ ಜಗತ್ತಿನ ಮಂದಿಗೂ ವಿಜಯ್ ಬಳಿಕ ಪರಿಚಯವಾದ್ರು. ಸುನೀಲ್ ಶೆಟ್ಟಿ ಅಭಿನಯದ `ಬಾಜ್' ಚಿತ್ರ ಒಂದು ಹಾಡಿಗೆ ಧ್ವನಿಯಾದ್ರು. ಅದುವೇ ವಿಜಯ್ ಹಿಂದಿ ಚಿತ್ರಕ್ಕೆ ಹಾಡಿದ ಮೊದಲ ಗೀತೆ. ಹೀಗೆ ಆರಂಭವಾದ ಹಿನ್ನೆಲೆ ಗಾಯನದ ಪಯಣ ಶುರುವಾಯಿತು. ತಮಿಳು ಚತ್ರಗಳಲ್ಲಿ ಹಾಡೊ ಅವಕಾಶವೂ ಆಗಲೇ ಬರುತ್ತಿದ್ದವು. ಹಿಂದಿ-ತಮಿಳು ಎರಡೂ ಭಾಷೆಯಲ್ಲಿ ಹಾಡುತ್ತಲೇ ಇದ್ರು. ಆಗಲೆ ರೆಹಮಾನ್ ಸಂಗೀತದ ಸ್ವದೇಶ್ ಚಿತ್ರಕ್ಕೆ ಒಂದು ಗೀತೆಗೆ ಧ್ವನಿಯಾಗೋ ಅವಕಾಶ ಬಂದಿತು. ಇಳೆಯರಾಜ್ ಸಂಗೀತ ನೀಡಿದ `ಚೀನಿ ಕಮ್ ಹೈ' ಚಿತ್ರದಲ್ಲೂ ಒಂದು ಹಾಡನ್ನ ಹಾಡಲು ಅವಕಾಶ ಬಂದಿತು...

ಉತ್ತರ-ದಕ್ಷಿಣ ಎರಡೂ ಕಡೆ ಪುಟ್ಟದಾಗಿ ಹೆಸರು ಮಾಡುತ್ತಲೇ ಇದ್ದ ವಿಜಯ್, ವಿಶ್ವವ್ಯಾಪಿ ಹೆಸರು ಮಾಡಿದ್ದು ಮಾತ್ರ ಜೈಹೋ ಹಾಡಿನಿಂದ. ಇಡೀ ಹಾಡಿಗೇನೂ ವಿಜಯ್ ಪ್ರಕಾಶ್ ಧ್ವನಿಯಿಲ್ಲ. ಕೇವಲ ಜೈಹೋ ಅಂದಿದ್ದಷ್ಟೆ. ಅದುವೇ ವಿಜಯ್ ಪ್ರಕಾಶ್ ರನ್ನ ವಿಜೈಹೋ ಪ್ರಕಾಶ್ ಎಂಬುಷ್ಟು ಖ್ಯಾತಿ ತಂದು ಕೊಡ್ತು...ಆದ್ರೆ, ಕನ್ನಡದ ಗಾಯಕ ಕನ್ನಡಕ್ಕೆ ಬರಲೇ ಇಲ್ಲವೇ ಅಂತ ಕೇಳಿಕೊಳ್ಳಬೇಕು ಅನಿಸುವ ಹೊತ್ತಿಗೆ `ಗಾಳಿಪಟ' ಚಿತ್ರದಲ್ಲಿ ಕವಿತೆ..ಕವಿತೆ ನೀನೇಕೆ ಪದಗಳಲ್ಲಿ ಕುಳಿತೆ ಎಂಬ ಹಾಡಿಗೆ ಅವಕಾಶ ಬಂತು. ಅದನ್ನ ಮನದುಂಬಿ ಹಾಡಿ...ಕನ್ನಡಿಗರ ಮನಕ್ಕೆ ಹತ್ತಿರವಾದ್ರು ವಿಜಯ್ ಪ್ರಕಾಶ್...ಅಲ್ಲಿಂದ ಕನ್ನಡದ ಗಾಯನದ ಪಯಣ ಶುರು...

ಇಲ್ಲಿವರೆಗೂ ಲೆಕ್ಕವಿಡಬಹುದಾದಷ್ಟು ಹಾಡುಗಳನ್ನ ಕನ್ನಡಕ್ಕೆ ಹಾಡಿದ್ದಾರೆ. ಸುದೀಪ್-ರಾಗಿಣಿ ಅಭಿನಯದ ಕೆಂಪೇಗೌಡ ಚಿತ್ರ ಥರ..ಥರ ಹಾಡಿಗೆ ವಿಜಯ್ ವಿಶೇಷ ಕಂಠದ ಸ್ಪರ್ಶವಿದೆ. ಇತ್ತೀಚಿಗೆ ತೆರೆ ಕಂಡಿದ್ದ ಜೋಗಯ್ಯ ಚಿತ್ರದ ಕುರಿ...ಕೋಳಿ ಹಾಡಿಗೂ ವಿಜಯ್ ಪ್ರಕಾಶ್ ಧ್ವನಿಯಿದೆ. ಕನ್ನಡದಲ್ಲೀ ಹಾಡಿರೊ ಇನ್ನು ಹಲವು ಚಿತ್ರಗಳು ತೆರೆ ಕಾಣಬೇಕಿದೆ. ಅದಕ್ಕೂ ಮೊದಲೇ ಸಂಗೀತ ನಿರ್ದೇಶನ ಮಾಡೊ ದೊಡ್ಡ ಜವಾಬ್ದಾರಿಯ ಅವಕಾಶ ಬಂದಿದೆ. ಅಂದರ್-ಬಾಹರ್ ಎಂಬ ಶೀರ್ಷಿಕೆಯ ಚಿತ್ರಕ್ಕೆ ವಿಜಯ್ ಪ್ರಕಾಶ್ ಸಂಗೀತ ನೀಡುತ್ತಿದ್ದಾರೆ. ಶಿವಣ್ಣ-ಪಾರ್ವತಿ ಮೆನನ್ ಅಭಿನಯದ ಈ ಚಿತ್ರದ ಚಿತ್ರೀಕರಣ ಬರೋ ವರ್ಷ ೧೫ ರಿಂದ ಶುರುವಾಗಲಿದೆ. ಹೊಸ ಹೆಜ್ಜೆ ಇಟ್ಟರೋ ವಿಜಯ್ ಪ್ರಕಾಶ್ ಅವರಿಗೆ ಜೈ ಹೋ...

ರೇವನ್ ಪಿ.ಜೇವೂರ್

No comments:

Post a Comment