Friday, July 30, 2010

ರಂಗಪ್ಪ ಹೋಗ್ಬಿಟ್ನಾ....?

ರಂಗಪ್ಪ ಇನ್ನಿಲ್ಲ. ರಂಗಪ್ಪ ಅಂತಹ ಮಹಾನ್ ವ್ಯಕ್ತಿಯಲ್ಲ. ಎಲ್ಲರಂತೇ ಈತ. ನಗುವುದು...ನಗಿಸುವುದು ಈತನಿಗೂ ಗೊತ್ತು. ಸಂಬಂಧಿಗಳೂ ಅಪಾರ. ಅದು-ಇದು ಕೂಡ ರಂಗಪ್ಪನ ಫಸ್ಟು..ಸೆಕೆಂಡು ಸೆಟಪ್ಪು. ಹೆಂಡ್ತಿಗೂ ಒಬ್ಬ ಬಾಯ್ ಫ್ರೆಂಡ್. ಆದ್ರೂ, ರಂಗಪ್ಪ ಗ್ರೇಟ್. ಕಾರಣ, ಈತನೇ ಚಿತ್ರದ "ಪ್ರಮುಖ" ಈತನ ಸುತ್ತವೇ ಎಲ್ಲ ಸಾಗುತ್ತದೆ. ಎಲ್ಲವೂ ಅಂತ್ಯಗೊಳ್ಳುತ್ತದೆ. ಈ ಆದಿ ಮತ್ತು ಅಂತ್ಯದ ನಡುವೆ ನಡೆಯುವ ಘಟನೆಗಳೇ "ರಮೇಶ್ ಅರವಿಂದ್" ಅಭಿನಯದ ಹೊಸ ಚಿತ್ರ "ರಂಗಪ್ಪ ಹೋಗ್ಬಿಟ್ನಾ...?"ದ ಹಾಸ್ಯ....

ನಟ ರಮೇಶ್ ಅರವಿಂದ್ ಈಗ ಮತ್ತೊಂದು ಹಾಸ್ಯ ಚಿತ್ರ ಪೂರ್ಣಗೊಳಿಸಿದ್ದಾರೆ. ಸಾಲು...ಸಾಲು ಚಿತ್ರಗಳ ರಿಲೀಜ್ ನ ಮಧ್ಯೆ "ರಂಗಪ್ಪ ಹೋಗ್ಬಿಟ್ನಾ...?" ಈಗಷ್ಟೇ ಚಿತ್ರೀಕರಣ ಮುಗಿಸಿದೆ. ಸೆಪ್ಟಂಬರ್ ತಿಂಗಳಲ್ಲಿ ಯಾವುದೇ ದಿನ ರಂಗಪ್ಪ ತೆರೆಗೆ ಬರುವ ಸಾಧ್ಯತೆ ಇದೆ...


ಈಗ ವಿಷಯ ಇದಲ್ಲ. ಚಿತ್ರದ ಕಥೆ ಬಗ್ಗೆ ಹೇಳೋದು ಜಾಸ್ತಿಯಿದೆ. ಸಾವಿನ ಸುತ್ತವೇ ಇಡೀ ಕಥೆ ಹೆಣೆಯಲಾಗಿದೆ. ಒಂದೇ ದಿನ ಒಂದೇ ಮನೆಯಲ್ಲಿ ರಂಗಪ್ಪನ ಕಥೆ ಬೆಳೆಯುತ್ತದೆ. ಬೇಕಾದ ವ್ಯಕ್ತಿ ಸತ್ತು ಹೋದಾಗ ನೆಂಟರು ಬಹಳ ದಿನ ಅಳುತ್ತಾರೆ. ಬೇಡವಾದ ವ್ಯಕ್ತಿ ಸತ್ತನೋ ಆಗ ಹತ್ತಿರದವರೂ ದೂರವಾಗ್ತಾರೆ. ಆದ್ರೆ, ಇಲ್ಲಿ ಹಾಗಲ್ಲ. "ಸಾವಿನ ಮುಂದೆ ಬದುಕಿನ ನರ್ತನ" ನಡೆಯುತ್ತದೆ. ಚಿತ್ರದ ಸಬ್ ಕ್ಯಾಪ್ಷನ್ ಸಹ ಇದನ್ನೇ ಇಡಲಾಗಿದೆ....


ನಿರ್ದೇಶಕ ಪ್ರಸನ್ನ ಸಾವಿನ ಸುದ್ದಿಯ ಸುತ್ತವೇ ಕಥೆ ಸೃಷ್ಟಿಸಿದ್ದಾರೆ. ಕಥೆಯ ಜೊತೆ..ಜೊತೆಗೆ ಹಾಸ್ಯವೇ ಪ್ರಧಾನವಾಗಿ ಹೊರಹೊಮ್ಮಲಿ ಅನ್ನೋದನ್ನ ಗಮನದಲ್ಲಿ ಇಟ್ಟುಕೊಂಡೇ "ರಂಪ್ಪನ ಸಾವಿನ" ಸುದ್ದಿ ಸಿದ್ಧ ಮಾಡಿದ್ದಾರೆ...ಆದ್ರೆ, ಇಲ್ಲಿ ಕೇವಲ ಸಾವಿನ ಸುದ್ದಿಯ ಹಾಸ್ಯದ ನರ್ತನ ಇದ್ದಂತೆ ಕಾಣುವುದಿಲ್ಲ. ಮನೆಯಲ್ಲಿ ಅದ್ಯಾರೋ ಬೇಕಾದವರು ಸತ್ತು ಹೋದ್ರೆ, ಏನೆಲ್ಲ ಸಾಧ್ಯತೆಗಳು ಇವೆ ಅನ್ನೋದನ್ನ ಹೇಳುವ ಸಾಹಸವನ್ನ ಮಾಡ್ತಿದ್ದಾರೆ ಅಂತಲೇ ಹೇಳಬಹುದು.


ಇನ್ನೊಂದು ಸಾಹಸವೂ ಚಿತ್ರೀಕರಣದಲ್ಲಿದೆ. ಲೆಕ್ಕದಂತೆ ಚಿತ್ರೀಕರಣವನ್ನ ೨೦ ದಿನದಲ್ಲಿ ಮುಗಿಸಬೇಕು. ಆದರೆ, ನಿರ್ದೇಶಕರು ಸಿಕ್ಕಾಪಟ್ಟೆ ಫಾಸ್ಟ್. ೧೬ ದಿನದಲ್ಲಿಯೇ "ರಂಗಪ್ಪನ ಕಥೆ" ಮುಗಿಸಿ ಹಾಕಿದ್ದಾರೆ. ಅಂದ್ರೆ, ಚಿತ್ರೀಕರಣದ ಕೆಲಸವಷ್ಟೇ ಈಗ ಮುಗಿದಿದೆ.


ಇಷ್ಟೆಲ್ಲ ಇರೋ ಚಿತ್ರದಲ್ಲಿ ರಂಗಪ್ಪನ ಪುತ್ರನ ಪಾತ್ರ ರಮೇಶ್ ಅರವಿಂದ್ ಅವರದ್ದು. ಈ ಹಿಂದಿನ ಚಿತ್ರಕ್ಕೆ ಹೋಲಿಸಿದ್ರೆ, ರಮೇಶ್ ಇಲ್ಲಿ ಹಾಸ್ಯ ಮಾಡೋದೇಯಿಲ್ಲ. ರಮೇಶ್ ಚಿತ್ರದಲ್ಲಿಯ ಸಂದಿಗ್ಧತೆಗಳಿಗೆ ಪ್ರೇಕ್ಷಕ ನಗ್ತಾನೆ. ತಂದೆಯ ಹಲವು ಗೋಜುಗಳಿಗೆ
ಪ್ರೇಕ್ಷಕ ಬಿದ್ದು....ಬಿದ್ದು ನಗ್ತಾನೆ. ಅಂತಹ ಹೊಸತನ "ರಂಗಪ್ಪ ಹೋಗ್ಬಿಟ್ನಾ" ದಲ್ಲಿ ಹಾಸ್ಯ ಚಿತ್ರ ಪ್ರಿಯರಿಗೆ ದೊರೆಯಲಿದೆ ಎಂಬ ನಂಬಿಕೆ ಈಗಲೇ ಚಿತ್ರ ತಂಡದಲ್ಲಿ ಮೂಡಿದೆ...


ಇಲ್ಲಿ ಇನ್ನೊಬ್ಬ ತಾರೆಯೂ ಬದಲಾಗಿದ್ದಾರೆ. "ಗಂಡ ಹೆಂಡತಿ"ಯಂತಹ ಚಿತ್ರದಲ್ಲಿ ಸ್ವಲ್ಪ ಜಾಸ್ತಿನೇ ಬೋಲ್ಡ್ ಸೀನ್ ನಲ್ಲಿ ಕಾಣಿಸಿಕೊಂಡ ನಟಿ ಸಂಜನಾ ರಂಗಪ್ಪನ ಮನೆಯಲ್ಲಿ ತುಂಬಾ ಸಭ್ಯೆಳು. ಮೈತುಂಬಾ ಸಾರಿ ಉಟ್ಟುಕೊಂಡು ಓಡಾಡುವ
ಸ್ನೇಹ ಎಂಬ ಸೊಸೆ. "ಮಾವ ಹೋಗ್ಬಿಟ್ನಾ"..? ಅನ್ನೊ ಸುದ್ದಿಯ ಗದ್ದಲದಲ್ಲಿ ಈಕೆಯದ್ದು ಒಂದಷ್ಟು ಪಾತ್ರವಿದೆ.. ಸಾಕಷ್ಟು ಅಭಿನಯವೂ ಇದೆಯಂತೆ.


ಇನ್ನುಳಿದಂತೆ ಸಿಹಿಕಹಿ ಚಂದ್ರು. ಮನ್ ದೀಪ್ ರಾಯ್, ಸಾಧು ಕೋಕಿಲ ಸೋದರ್ ಲಯನ್ ರಾಜ್. ಹೀಗೆ ಹಾಸ್ಯ ಕಲಾವಿದರ ದಂಡು "ರಂಗಪ್ಪನ" ಕಥೆಯಲ್ಲಿದೆ. ಕಿರುತೆರೆಯ ನಟ ನಂಜುಂಡ. ಹಿರಿ ತೆರೆಯಲ್ಲಿ ಕಾಣಿಸಿಕೊಂಡು ಕಿರುತೆರೆಯಲ್ಲಿ ಮಿಂಚುತ್ತಿರುವ ರವಿಕಿರಣ್ ಹತ್ತು ವರ್ಷದ ಸುದೀರ್ಘ ಗ್ಯಾಪ್ ನ ನಂತರ "ರಂಗಪ್ಪ ಹೋಗ್ಬಿಟ್ನಾ...? ದಲ್ಲಿ ಕಾಣಿಸಿಕೊಳ್ತಾಯಿದ್ದಾರೆ. ಹೊಸತನ..ಹೊಸ ನಿರ್ದೇಶಕರ ರಂಗಪ್ಪ ಹೋಗ್ಬಿಟ್ನಾ ಟೈಟಲ್ ನಿಂದಲೇ ಸದ್ಯ ಗಮನ ಸೆಳೆಯುತ್ತಿದೆ. ತೆರೆ ಮೇಲೆ ಬಂದ ನಂತರ ಇನ್ನು ಏನೇಲ್ಲ ಮಾಡ್ತದೋ....ಆ ರಂಗಪ್ಪನೇ ಬಲ್ಲ...

-ರೇವನ್ ಪಿ.ಜೇವೂರ್

Sunday, July 25, 2010

ಯಕ್ಷಯಾನ....ಯೋಗಿಗಾನ...

"ಯೋಗಿ" ಅಲಿಯಾಸ್ ಲೂಸ್ ಮಾದ "ಯಕ್ಷ" ನಾಗಿ ಬಿಟ್ಟಿದ್ದಾನೆ. "ದುನಿಯಾ"ದಲ್ಲಿ ಲೂಸ್...ಲೂಸ್ ಥರವೇ ಆಡಿ ಗಮನ ಸೆಳೆದ . ಮುಂದಿನ ಬಹುತೇಕ ಚಿತ್ರಗಳು ಲೂಸ್ ಯೋಗಿಗೆ ಚಿಕ್ಕವಯಸ್ಸಿನಲ್ಲಿಯೇ ದೊಡ್ಡ ಹೆಸರು ತಂದಕೊಟ್ಟವು. ಆದ್ರೆ, ನಂತರ ಲೂಸ್ ಮಾದ ಬೋರ್ ಆದದ್ದು ಗೊತ್ತೇಯಿದೆ. ಈಗ ಹೊಸ ಅವತಾರ್ ದಲ್ಲಿ ಯೋಗಿ ಬರಲಿದ್ದಾನೆ. ತಂದೆ ಟಿ.ಪಿ.ಸಿದ್ಧರಾಜು ದುಡ್ಡು ಹಾಕಿರುವ ಚಿತ್ರಕ್ಕೆ ಈತನೆ ನಾಯಕ...ಈತೇನೆ ಯಕ್ಷ...

ಆದ್ರೆ, ರಮೇಶ್ ಭಾಗವತ್ ಅವರ ಕಥೆಯಲ್ಲಿ ಇನ್ನಷ್ಟು ಪ್ರಮುಖ ಪಾತ್ರಗಳಿವೆ. ಯೋಗರಾಜ್ ಪುಲಕೇಶಿ ರೋಲ್ ಗೆ ಈ ಮೊದಲೇ ಇವರೇ ಬೇಕು ಅಂದುಕೊಂಡಂತೇನೆ ಬಾಲಿವುಡ್ ನ "ನಾನಾ ಪಾಟೇಕರ್" ಬಂದು ಪೋಲಿಸ್ ಅಧಿಕಾರಿ ಕೆಲಸ ಮಾಡಿ ಹೋಗಿದ್ದಾರೆ. ತಮ್ಮ ಪಾತ್ರಕ್ಕೆ ತಾವೇ ಧ್ವನಿಯಾಗಿ ಜೀವತುಂಬಿದ್ದಾರೆ.


ಕೇವಲ ನಾನಾ ಪಾಟೇಕರ್ ಅಲ್ಲ. ಮುಂಬೈ ನಲ್ಲಿ ಮಿಂಚುತ್ತಿರುವ ಅತುಲ್ ಕುಲಕರ್ಣಿ ಬಂದಿದ್ದಾರೆ. ಆ ದಿನಗಳಲ್ಲಿ ನಟಿಸಿದ್ದು ಎಲ್ಲರಿಗೂ ಗೊತ್ತು. "ಯಕ್ಷ" ಚಿತ್ರದಲ್ಲಿ ಅತುಲ್ ಡಾನ್ ಪಾತ್ರದ ಮೂಲಕ ಮತ್ತೆ ಗಮನ ಸೆಳೆಯಲು ಸಜ್ಜಾಗಿದ್ದಾರೆ.


"ಯೋಗಿ" ಯಕ್ಷದಲ್ಲಿ ಹೊಸದನ್ನ ಟ್ರೈ ಮಾಡಿದ್ದಾನೆ. ಮೂವರು ಸಾಹಸ ನಿರ್ದೇಶಕರು ಹೇಳಿಕೊಟ್ಟ ಸಾಹಸವನ್ನ ಅಂಜು ಅಳುಕಿಲ್ಲದೇ ಮಾಡಿದ್ದಾನೆ. ಸ್ಕೂಬಾ ಡೈವಿಂಗ್ ನಂತಹ ಸಾಹಸಕ್ಕೂ ಕೈಹಾಕಿ ಯಶಸ್ವಿಯಾಗಿ ನಿರ್ವಹಿಸಿ ಮರಳಿದ್ದಾನೆ. ರಾಪ್ ಥರ ಹಾಡೊಂದರಲ್ಲಿ ಸಖತ್ ಡಾನ್ಸೂ ಮಾಡಿದ್ದಾನೆ. ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜಿಸಿದ್ದ ಈ ಹಾಡು ಬೆಂಗಳೂರಲ್ಲಿ ಶೂಟ್ ಆಗಿದೆ. ಬ್ಯಾಂಕಾಕ್ ನಲ್ಲಿ ಒಂದು ಹಾಡು ಚಿತ್ರೀಕರಣವಾಗಿದೆ.


ಚಿತ್ರದ ಹಾಡುಗಳು ಲಂಡನ್ ನಲ್ಲಿ ಮಾಸ್ಟ್ರಿಂಗ್ ಆಗಿವೆ. ಇಂಗ್ಲೀಷ ಚಿತ್ರದ ಹಾಡೊಂದನ್ನ ನೋಡಿದಾಗ ಆಗುವ ಆ ಎಲ್ಲ ಫೀಲ್
"ಯಕ್ಷ" ನ ಗೀತೆಯಲ್ಲಿರಲಿವೆಯಂತೆ. ಅನೂಪ್ ಸೀಳಿನ್ ನಂತಹ ಯುವ ಸಂಗೀತ ನಿದೇರ್ಶಕ ಇಂತಹದೊಂದು ಸಾಹಸವನ್ನ ಬರೊಬ್ಬರಿ ೬ ತಿಂಗಳವರೆಗೂ ಕುಳಿತು ಮಾಡಿದ್ದಾನೆ. ಮಾಸ್ಟರಿಂಗ್ ಆದ ಹಾಡುಗಳು ಈಗಾಗಲೇ ಎಫ್ ಎಂ ರೇಡಿಯೋದಲ್ಲಿ ಪ್ರಸಾರವಾಗ್ತಿವೆ.


ಯಕ್ಷನ ಚಿತ್ರದಲ್ಲಿ ಮ್ಯಾಜಿಕ್ ಇದೆ. ಅಘಾದ ಶಕ್ತಿ ಕೈಗೆ ಬಂದರೆ ಶ್ರೀಸಾಮಾನ್ಯನು ಅಡ್ಡದಾರಿ ಹಿಡಿಯಬಹುದೆಂಬ ಕಲ್ಪನೆಯ ಅನಾವರಣ ಇದರಲ್ಲಿದೆ ಅನಿಸುತ್ತದೆ. ಕಾರಣ ಸದ್ಯ ಲಭ್ಯವಿರುವ ಪ್ರಮೋಗಳು ಯಕ್ಷನ ಯಕ್ಷಗಾನ ತೆರೆದಿಟ್ಟಿವೆ. ಕೇವಲ ಸ್ಟೈಲಿಷ್ ಡ್ರೆಸ್ ಅಂಡ್ ಲುಕ್ ಅಲ್ಲದೇ, ಹುಲಿ ವೇಷದಲ್ಲೂ ಮಿಸ್ಟರ್ ಲೂಸು ಕಾಣಿಸಿಕೊಂಡಿದ್ದಾನೆ. ಹೆಗಲ ಮೇಲೆ ಹಾವನ್ನೂ ಹಾಕಿಕೊಂಡು ಮ್ಯಾಜಿಕ್ ಮಾಡಿದ್ದಾನೆ.


"ಯಕ್ಷ" ಚಿತ್ರ ತಂಡಕ್ಕೆ ರೋಚಕ ಅನುಭವ ನೀಡಿದೆ. ನಾನಾ ಜೊತೆಗಿನ ಅಭಿನಯ ಖುಷಿಕೊಟ್ಟಿದೆ. ಅತುಲ್ ಕುಲಕರ್ಣಿ ಯೋಗಿಗೆ ಡೆಡಿಕೇಷನ್ ಬಗ್ಗೆ ಪಾಠ ಮಾಡಿ ಹೋಗಿದ್ದಾರೆ. ಇದೇ ೩೦ ರಂದು ಚಿತ್ರ ತಂಡ "ಯಕ್ಷ"ನ ಹಾಡನ್ನ ರಿಲೀಜ್ ಮಾಡಲಿದೆ. ಚಿತ್ರ ಬರುವ ಆಗಷ್ಟ್ ತಿಂಗಳಲ್ಲಿ ತೆರೆಗೆ ಬರಲಿದೆ. ಅಲ್ಲಿವರೆಗೂ "ಯಕ್ಷ"ನ ಹಾಡುಗಳು ಸದ್ದು ಮಾಡುವ ಹಾಗಿವೆ..

- ರೇವನ್ ಪಿ.ಜೇವೂರ್

Tuesday, July 20, 2010

ನಮ್ ಏರಿಯಾಲ್ ಒಂದಿನ...

ನಮ್ಮ ಏರಿಯಾಲ್ ಒಂದಿನ. ಅರವಿಂದ್ ಕೌಶಿಕ್ ಮೊದಲ ಚಿತ್ರ. ಮಂಡ್ಯಾ ರಮೇಶ್ ಅವರ ಶಿಷ್ಯ. ಸಾಕಷ್ಟು ಕನಸು ಕಂಡು ಮಾಡಿದ್ದ ಚಿತ್ರವಿದು. ಹೊಸ...ಹೊಸ ಪ್ರಯೋಗಳನ್ನ ನಮ್ ಏರಿಯಾಲ್ ಮಾಡಿದ್ದಾರೆ. ಒಂದರ್ಥದಲ್ಲಿ ಇದು ಹೊಸ ತಲೆ ಮಾರಿನ ಚಿತ್ರವಂತಲೇ ಹೇಳಬಹುದು. ಪ್ರಯೋಗಾತ್ಮಕ ಸಿನೆಮಾ ಅಂದರೂ ತಪ್ಪಾಗಲಾರದು. ಗಾಂಧಿನಗರದ ಸಿದ್ಧ ಸೂತ್ರಗಳನ್ನ ನಮ್ ಏರಿಯಾದ ಹುಡುಗ್ರು ಮುರಿದ್ದಾರೆ...ಆದ್ರೆ..ದುರಂತ ಇವರನ್ನ ಬಿಟ್ಟಿಲ್ಲ. ಮೊದಲ ಚಿತ್ರ ಇನ್ನೇನು ರಿಲೀಜ್ ಆಗ್ತದೆ. ಇಂತಹ ಒಂದು ಕನಸಲ್ಲಿ...ಅಹಂನಲ್ಲಿ ಹೊಸತರದ ಪ್ರಮೋಗಳನ್ನ ಮಾಡಿತ್ತು ಕೌಶಿಕ್ ಟೀಮ್... ಅಷ್ಟೇ. ಆ ನಂತರ ಎಲ್ಲವೂ ಮಾಯಾಮೃಗವೇ...

ಚಿತ್ರ ಬಿಡುಗಡೆಯಾಗುವ ದಿನಗಳು ಬರಬರುತ್ತಾ ೩೬೫ ದಿನಗಳೇ ಕಳೆದು ಹೋದವು. ಈ ೩೬೫ ದಿನಗಳಿಗೆ ಇನ್ನೊಂದಷ್ಟು ದಿನಗಳು ಸೇರಿ ಎರಡು ವರ್ಷವೇ ಆಯಿತು. ಚಿತ್ರದಲ್ಲಿ ನಟಿಸಿದ ನಾಯಕ ಅನೀಷ್ "ಪೋಲಿಸ್ ಕ್ವಾಟರ್ಸ್ " ಅನ್ನೊ ಎರಡನೇ ಚಿತ್ರದಲ್ಲಿ ಅಭಿನಯಿಸಿದ. ಚಿತ್ರವೂ ರಿಲೀಜ್ ಆಯಿತು. ಆದರೆ, "ನಮ್ ಏರಿಯಾಲ್ ಒಂದಿನ" ಮತ್ತೆ ಕನಸಾಗಿ ಉಳಿಯಿತು. ಅಷ್ಟರಲ್ಲಿಯೆ ಇಡೀ ಟೀಮ್ ಬೇರೆ..ಬೇರೆ ಕೆಲಸಗಳಲ್ಲಿ ತೊಡಗಿತು. "ನಮ್ ಏರಿಯಾಲ್ ಒಂದಿನ" ಪ್ರೀತಿ ಬಿಟ್ಟು ಹೋಗಲಿಲ್ಲ ಬಿಡಿ...
ಹಲವು ಕಷ್ಟ...ನಷ್ಟಗಳನ್ನ ಎದುರಿಸಿ ಈಗ ಹುಡುಗ್ರ ಮತ್ತೆ ಚೇತರಿಸಿಕೊಂಡಿದ್ದಾರೆ. ಇದೇ ೨೩ ರಂದು ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಇದೇ ಖುಷಿಯಲ್ಲಿಯೆ ಕೌಶಿಕ್ ಅಂಡ್ ಟೀಮ್ ಮತ್ತೊಂದು ಪ್ರಮೋ ಮಾಡಿದೆ. ಈ ಪ್ರಮೋ ಅದು ಹೇಗಿದೆ ಅಂದ್ರೆ, ತಮ್ಮನ್ನ ತಾವೇ ಗೇಲಿ ಮಾಡಿಕೊಂಡಿದ್ದಾರೆ. ಚಿತ್ರ ತಡವಾಗಿದಕ್ಕೆ ತಾವೇ ಚೇಷ್ಠೆಗಳನ್ನ ಮಾಡಿದ್ದಾರೆ. ತಾವೇ ಆಕ್ಟೂ ಮಾಡಿದ್ದಾರೆ. ರವಿತೇಜ ಅನ್ನೊ ಯುವ ನಟ ಈ ಪ್ರಮೋದಲ್ಲಿ ಸಾಕಷ್ಟು ಗಮನ ಸೆಳೀತಾರೆ...ಇನ್ನಿಲ್ಲದಷ್ಟು ಹಾಸ್ಯದ ರಸದೌತಣ ಬಡಿಸ್ತಾರೆ..ಅಷ್ಟು ಕ್ರಿಯಾಶೀಲ್ ಪ್ರಮೋರಿಯದು. ಅದನ್ನ ಅಕ್ಷರಗಳಲ್ಲಿ ಹೇಳುವುದಕ್ಕಿಂತ ನೋಡಿಯೆ ಅನುಭವಿಸಬೇಕು....

ಚಿತ್ರದ ಕಂಟೆಂಟ್ ವಿಷಯಕ್ಕೆ ಬಂದ್ರೆ, ಇಲ್ಲಿ ಗಲ್ಲಿ ಹುಡುಗರ ಪ್ರೀತಿಯಿದೆ. ಕ್ರಿಕೆಟ್ ಕ್ರೇಜ್ ಇದೆ. ಏರಿಯಾ ಹುಡುಗರ ಹೊಡೆದಾಟ..ಬಡೆದಾಟವಿದೆ. ಇದಕ್ಕೂ ಮೀರಿದ ಅಶೋಕ್ ಕಶ್ಯಪ್ ಅವರ ಛಾಯಾಗ್ರಹಣವಿದೆ. ಅಷ್ಟೊಂದು ಹೊಸರೂಪದವೆನಿಸುವ ಅಶೋಕ್ ವರ್ಕ್ ಹೊಸ ಅನುಭವ ನೀಡ್ತದೆ. ಈ ಹಿಂದೆ ಇರದ ಫ್ರೇಮಿಂಗ್. ಹೊಸ ಥರದ ಕ್ಯಾಮೆರಾಯ್ಯಾಂಗಲ್. ವಿಷಯವನ್ನ ಆಳವಾಗಿ..ಕುತೂಹಲಕಾರಿಯಾಗಿ ತೋರಬಲ್ಲ ಎಲ್ಲ ತಂತ್ರಗಳು ಇಲ್ಲಿ ಬಳಕೆಯಾಗಿವೆ...

ನವ ನಟ ಅನಿಷ್ ಇಲ್ಲಿ ಸಖತ್ ಫೈಟ್ ಮಾಡಿದ್ದಾರೆ. ಮೇಘನಾ ಗಾಂವಕರ್ ಲುಕ್ ಅಂಡ್ ಫೀಲ್ ಚೆನ್ನಾಗಿದೆ ಅನಿಸುತ್ತದೆ. ಖಳನಾಯಕನ ಪಾತ್ರಧಾರಿ ರವಿತೇಜ ಇಲ್ಲಿ ಒಂಚೂರು ಕಾಮಿಡಿನೂ ಮಾಡ್ತಾರೆ. ಸದ್ಯಕ್ಕೆ ಇಷ್ಟು ಚಿತ್ರದ ಬಗ್ಗೆ ಗೊತ್ತಾಗಿರುವ ಸಂಗತಿ. ಇತ್ತೀಚಿಗೆ ಕರೆದ ಪ್ರೆಸ್ ಮೀಟ್ ನಲ್ಲಿ ಈ ಎಲ್ಲ ಸಂಗತಿಗಳನ್ನ ಹಂಚಿಕೊಂಡಿದೆ ನವ ಉತ್ಸಾಹದ ಕೌಶಿಕ್ ಟೀಮ್. ಇದೇ ಬರುವ ೨೩ ರಂದು ಚಿತ್ರ ತೆರೆಗೆ ಬರುತ್ತಿರುವ ಕಾರಣ ಮತ್ತೆ ಉತ್ಸಾಹ ಮೂಡಿಸಿಕೊಂಡ ಟೀಮ್ ಬಿಡುಗಡೆಯ ಗಡಿಬಿಡಿಯಲ್ಲಿ ಓಡಾಡುತ್ತಿದೆ. ಇವರ ಓಡಾಟ ಯಶಸ್ವಿಯಾಗಲಿ...

- ರೇವನ್ ಪಿ.ಜೇವೂರ್

Friday, July 16, 2010

ನಾ ನೋಡಿದ ಅರ್ಧ ಚಿತ್ರ...

ನಾ ಒಂದು ಚಿತ್ರ ನೋಡಿದೆ. ಅದು ಕೇವಲ ಅರ್ಧ ಗಂಟೆ. ಆರಂಭ ಗೊತ್ತಿಲ್ಲ. ಅಂತ್ಯವೂ ಗೊತ್ತಿಲ್ಲ. ವೀಕ್ಷಿಸಿದ ಕೇವಲ ೩೦ ನಿಮಿಷದಲ್ಲಿ ನೆಚ್ಚಿನ ಹಾಡು ಬಂದು ಹೋಯಿತು. ಹೀರೊ.ಹೀರೋಯಿನ್ ಬಗ್ಗೆ ಅವರಿಂದಲೇ ಕೇಳಿ ತಿಳಿದುಕೊಂಡ ವಿಷಯಗಳ ದರುಶನವೂ ಆಯಿತು. ನೋಡಿದ ಅರ್ಧ ಗಂಟೆಯ ವಿರ್ಮಶೆ ಇಲ್ಲಿದೆ. ಎರಡೂ ವರೆ ಗಂಟೆ ಚಿತ್ರ ನೋಡಿದಾಗಲೇ ಚಿತ್ರ ವಿರ್ಮಶೆ ಮಾಡುವುದು ಕಷ್ಟ. ಅಂತದ್ರಲ್ಲಿ ಇದು ಸರೀನಾ ಅನ್ನಬಹುದು. ಇದು ನಿಜಾನೆ. ಆದ್ರೂ, ಅರ್ಧಗಂಟೆಯ ಚಿತ್ರ ಕಾಡುತ್ತಿದೆ. ಸಾಲಾಗಲು ಪ್ರಯತ್ನಿಸುತ್ತಿದೆ. ಅದಕ್ಕೇನೆ ಮನಸ್ಸು ಈಗ ಅಕ್ಷರಗಳ ಗುಲಾಮ..

ಚಿತ್ರ ನಟ ರಾಜ್ . ಗೆಳತಿ ಬಿಂದು. ಇದು ಅರ್ಧಗಂಟೆಯಲ್ಲಿ ತಿಳಿದ ಸತ್ಯ. ಇಬ್ಬರಲೂ ಪ್ರೀತಿ. ಅವನಿಗೆ ಅಂತರಾಳದ ಪ್ರೀತಿ ಹೇಳಲಾಗದ ಸ್ಥಿತಿ. ಬಿಂದು ಗೆ ಗೆಳೆಯನ ಮನ ತಿಳಿಯುವ ಕುತೂಹಲ. ಇದರ ಮಧ್ಯೆ ಕಾಡಲ್ಲಿ ಕುಳಿತು ಇಬ್ಬರ ಪರಸ್ಪರ ಪ್ರೀತಿಯ ಸುತ್ತದ ಮಾತು-ಕಥೆ. ಆಗಲ್ಲ ಅಂದು ಹೋಗುವ ನಾಯಕ ಕೈಹಿಡಿದು ನಾ..ನಿನ್ನ ಪ್ರೇಯಸಿ ಅಂದು ಬಿಡುವ ಬಿಂದು. ಇಷ್ಟಾದ ಮೇಲೆ ಅದಲ್ಲೊಂದು ಹಾಡು...

ಗಾಳಿಯೇ ನೋಡು ಬಾ...
ದೀಪದಾ ನರ್ತನ...

ಹೌದು!!! ಇದು "ಸಂಚಾರಿ" ಚಿತ್ರದ ಕ್ಲೈಮ್ಯಾಕ್ಸ್ನ ಮುಂಚೆ ನಡೆಯುವ ದೃಶ್ಯ. ಈ ಅಂತ್ಯದಲ್ಲಿ ಖಳನಾಯಕರು ಬಂದು ಹೋಗುತ್ತಾರೆ. ಅವರು ಬಂದ ಮೇಲೆ ಮುಂದೇನಾಗುತ್ತದೆ ಅಂತ ಹೇಳೋದು ಬೇಡ. ರಾಜ್ ಆಕ್ಷನ್ ಶುರು. ಬಿಂದು ರೋದನ
ಆರಂಭ. ಇದಾದ ಮೇಲೆ ಏನ್ ಆಯಿತು. ಗೊತ್ತಿಲ್ಲ. ಅಷ್ಟು ಹೊತ್ತಿಗೆ ಹೊರಗೇ ಬರಲೇ ಬೇಕಿತ್ತು. ಕಾರಣ. ಅದು "ಸಂಚಾರಿ" ನೋಡಿದವರ ಅಭಿಪ್ರಾಯ ಕೇಳುವ ಸಮಯ.

ಫೈಟ್ಸ್ ಚೆನ್ನಾಗಿವೆ ಅಂದ್ರು...

ಹಾಡು ಗೆದ್ದಿವೆ ಅಂತ ಮತ್ತೆ..ಮತ್ತೆ ಹೇಳಿದರು.

ಕ್ಲೈಮ್ಯಾಕ್ಸ್ ಇನ್ನು ಸರಿ ಹೋಗಬೇಕಿತ್ತು ಅಂದರು.

ಮೊದಲ ದಿನದ ರೆಸ್ಪಾನ್ಸ್ ಬಹುತೇಕ ನಂಬಿಕೆಗೆ ಅರ್ಹ ಅಲ್ಲವೇ ಅಲ್ಲ. ಎರಡನೇ ದಿನವೋ. ಮೂರನೇ ದಿನವೋ ಬಣ್ಣದ ಬಣ್ಣ ಬಯಲಾಗುತ್ತದೆ. ಅಲ್ಲಿವರೆಗೂ ಕಾಯಬೇಕು. ಆದ್ರೆ, ಗೋವಿಯವರ ಕಥೆ ಬಗ್ಗೆ ನೋಡಿದವರು ಅಭಿಪ್ರಾಯ ಹೇಳಿದ್ದಾರೆ. ಅರ್ಜುನ್ ಸಂಗೀತ ಗೆದ್ದಿದೆ. ಹಾಡನ್ನ ತೆರೆಗೆ ತರುವಲ್ಲಿ ಕಿರಣ್ ಗೋವಿ ಸೋತಿಲ್ಲ. ರವಿವರ್ಮ ಸಾಹಸ ಇಷ್ಟವಾಗ್ತವೆ. ನಾಯಕ ರಾಜ್ ಚೆನ್ನಾಗಿ ಫೈಟ್ ಮಾಡಿದ್ದಾರೆ. ಬಿಂದು ಪಾತ್ರಧಾರಿ ಬಿಯಾಂಕಾ ಎಕ್ಸಪ್ರೆಷನ್ ಚೆನ್ನಾಗಿವೆ. ರಾಜ್ ನಟನೆ ಇನ್ನಷ್ಟು ಮಾಗಬೇಕು. ಇಷ್ಟು "ಸಂಚಾರಿ" ಸಿನೆಮಾ. ಇನ್ನಷ್ಟು ಪೂರ್ತಿ ಚಿತ್ರ ನೋಡಿದ ಮೇಲೆ ಬರೆಯುತ್ತೇನೆ .ಸಾರಿ..ಅರ್ಧ ಚಿತ್ರ ನೋಡಿ ಬರೆದಿದ್ದಕ್ಕೆ...

- ರೇವನ್ ಪಿ.ಜೇವೂರ್

Wednesday, July 14, 2010

ವಿನೋದ್ ಪ್ರಭಾಕರ್ ಎಂಬ ಮರಿ ಟೈಗರ್

ಚಿತ್ರರಂಗದ ಟೈಗರ್ ಅಂದರೆ ಯಾರು. ಇದನ್ನ ಹೇಳೊದೇ ಬೇಡ. ತಟ್ಟನೇ ಮೊದಲು ಬರುವ ಹೆಸರು ಪ್ರಭಾಕರ. ಎರಡನೆ ವ್ಯಕ್ತಿಯ ಹೆಸರು ಆಗು ಇರಲಿಲ್ಲ. ಈಗಲೂ ಇಲ್ಲ. ಆದ್ರೆ, ಟೈಗರ್ ಪ್ರಭಾಕರ ಹೋಗಿದ್ದೇ ತಡ. ಇಲ್ಲಿ ಅವರನ್ನ ಅನುಕರಣೇ ಮಾಡುವ ಪ್ರಭಾಕರ್ ಗಳು ಸಾಕಷ್ಟು ಹುಟ್ಟಿಗೊಂಡರು. ಪ್ರಭಾಕರ್ ಎಲ್ಲಿ...ಅವರಲ್ಲಿ. ಒಂಚೂರು ಅವರಂತೆ ಡೈಲಾಗ್ ಹೊಡಿತಿದ್ದರು. ದುನಿಯಾ ವಿಜಿ ಕೂಡ ಪ್ರಭಾಕರ್ ಪ್ರೇಮಿ. ಪ್ರಭಾಕರ್ ಅವರನ್ನ ಮೀರಿಸುವ..ಹೋಲುವ ವ್ಯಕ್ತಿ ಇದ್ದಾರೆಯೇ...? ಇಂತಹ ಪ್ರಶ್ನೆಗೆ ಉತ್ತರ ಸಿಗೋದಿಲ್ಲ. ಹೋಲಿಕೆ ಸಿಬಹುದು.

ಹೌದು...!!! ಅದು ವಿನೋದ್ ಪ್ರಭಾಕರ್. ಕನ್ನಡ ಚಿತ್ರರಂಗದಲ್ಲಿ ಸದ್ಯ ಮಿಂಚಲು ಪ್ರಯತ್ನಿಸುತ್ತಿರುವ ಕಟ್ಟುಮಸ್ತಾದ ಯುವಕ. "ನವಗ್ರಹ" ದಂತಹ ಕನ್ನಡದ ಚಿತ್ರದ ಮೂಲಕ ಅಪ್ಪನಂತೆ ಬೆಳ್ಳಿ ತೆರೆಗೆ ಬಂದವರು. ತಂದೆ ಪ್ರಭಾಕರ್ ಖಳನಾಯಕನಾಗಿಯೇ ಪ್ರವೇಶ ಪಡೆದಿದ್ದರು. ಪುತ್ರನ ವಿಷಯದಲ್ಲಿ ಆ ರೀತಿ ಆಗಿಲ್ಲ. ಖಳನಾಯಕರ ಮಕ್ಕಳೆಲ್ಲ ನಾಯಕರಾಗಿ ಅಭಿನಯಿಸಿದ "ನವಗ್ರಹ" ಚಿತ್ರದಲ್ಲಿ ವಿನೋದ್ ನಾಯಕರಾಗಿ ತೆರೆ ಮೇಲೆ ಕಾಣಿಸಿಕೊಂಡರು.

ನವಗ್ರಹದಿಂದಲೇ ಚಿರಪರಿಚತರಾದ ವಿನೋದ್ ಥೇಟ್ ಪ್ರಭಾಕರ್ ಥರವೇ ಇದ್ದಾರೆ. ಅಪ್ಪನ ಹೋಲಿಕೆ ಯಥಾವತ್ತು ಇದೆ. ಫಿಜಿಕ್ ಅಂಡ್ ಫಿಟ್ ನೆಸ್ ಸೇಮ್ ಟು ಸೇಮ್. ೬.೨ ಇಂಚ್ ಹೈಟು. ಉದ್ದನೇಯ ಕೈಗಳು. ಎಲ್ಲೇ ನಿಂತರೂ ಅಷ್ಟೆ. ಎತ್ತರದ ಕಾಯ ಎದ್ದು ಕಾಣುತ್ತದೆ. ಕಾರಣ ಅಪ್ಪ ಹೇಳಿಕೊಟ್ಟ ವ್ಯಾಯಾಮದ ತಂತ್ರಗಳು ದೇಹವನ್ನ ಚೆನ್ನಾಗಿ ಬೆಳಸಿವೆ. ಒಂದೇ ಒಂದು ದಿನ ವ್ಯಾಯಾಮ ಮಾಡದೆ ವಿನೋದ್ ಹೊರಗೆ ಬೀಳೋದೆಯಿಲ್ಲ. ಅಪ್ಪ ಅಷ್ಟು ಮಜ್ಬೂತ್ ಅಡಿಪಾಯ್ ಹಾಕಿ ಹೋಗಿದ್ದಾರೆ.

ಅಪ್ಪನಂತೇ ಆಕ್ಷನ್ ಆಸ್ತಕಿ ಮೈಗೂಡಿಕೊಡ್ಡಿದೆ. ಡಾನ್ಸ್ ಕಷ್ಟ. ಮಾಡುವ ಉತ್ಸಾಹವಾಗಲಿ. ಕಲಿಕೆಯ ಕ್ರೇಜ್ ಆಗಲಿ ಕಡಿಮೆ ಇಲ್ಲ. ತೊಂದರೆಯಾದ್ರು ಚೆನ್ನಾಗಿ ಮಾಡಬಲ್ಲ ಛಲವಿದೆ. ಕನ್ನಡದಲ್ಲಿ ತಂದೆಯ ಹೆಸರು ಉಳಿಸಬೇಕೆಂಬ ಹೆಬ್ಬಯಕೆ. ತನನ್ನ ತನ್ನ ತಂದೆಯಿಂದಲೇ ಜನ ಗುರುತಿಸುತ್ತಾರೆಂಬು ಗೊತ್ತಿದೆ. ಅದು ಗೊತ್ತಿದ್ದರೂ ಕೂಡ ಬೇಜಾರಿಲ್ಲ. ತಂದೆ ಥರವೇ ಮಿಂಚುವ ದೊಡ್ಡ ಕನಸು.
ಹೋರಿ ಅಂತ ಕಳೆದ ವರ್ಷ ಸೆಟ್ಟೇರಿದ ಚಿತ್ರದಲ್ಲಿ ಈತ ನಾಯಕ. ರಮಣೀತೋ ಚೌಧರಿ ವಿನೊದ್ ಗೆ ಸಾಥ್ ನೀಡ್ತಾಯಿದ್ದಾರೆ. ಗೌರಿ ಮುಂಜಾಲ್ ಮತ್ತೊಬ್ಬ ಚೆಲುವೆ. ಇವರ ಮಧ್ಯೆ ವಿನೋದ್ ಹೀರೊ. ಮನ ತಟ್ಟುವ ಹಾಡುಗಳು ಸಿನೆಮಾಕ್ಕೆ ಸಿದ್ಧವಾಗ್ತಿವೆ. ಈಗಾಗಲೇ ಚಿತ್ರದ ತಮ್ಮ ಆಕ್ಷನ್ ಪ್ಯಾಕ್ಡ್ ಕೆಲಸ ಮುಗಿದಿದೆ. ಕ್ಲೈಮ್ಯಾಕ್ಸ್ ಶೂಟಿಂಗೂ ಕಂಪ್ಲಿಟ್ ಆಗಿದೆ. ಹಾಡಿನ ಚಿತ್ರೀಕಣಕ್ಕೆ ಇಡೀ ತಂಡ ಬ್ಯಾಂಕಾಕ್ ಗೂ ಹೋಗಲಿದೆ...

ತಮ್ಮ ಚಿತ್ರದ ಬಗ್ಗೆ ವಿನೋದ್ ಗೆ ತುಂಬಾನೆ ಉತ್ಸಾಹವಿದೆ. ಪ್ರೀತಿನೂ ಅಷ್ಟೇ ಇದೆ. ಚಿತ್ರದ ತಯಾರಿಕೆಯ ಈ ಹಿಂದೆ ಸ್ಥಗಿತಗೊಂಡಿತ್ತು. ಇದಕ್ಕೆ ಸಾಕಷ್ಟು ಕಾರಣಗಳೂ ಇವೆ. ವಿನೋದ್ ಭಾರೀ ಆಕ್ಷನ್ ಮಾಡಿ ಕೈ ಮುರಿದುಕೊಂಡರು. ಇದರಿಂದ ಶೂಟಿಂಗ್ ಸ್ಟಾಪ್ ಆಯಿತು. ನಂತರ ವಿನೋದ್ ತಾಯಿ ತೀರಿ ಹೋದರು. ಈ ದು:ಖದಿಂದ ವಿನೋದ್ ಹೊರ ಬರಲು ತುಂಬಾನೇ ದಿನಗಳು ಕಳೆದವು. ಡೈರೆಕ್ಟರ್ ನಾಗೇಂದ್ರ ಮಾಗಡಿ ಆರೋಗ್ಯ ಕೆಟ್ಟಿತ್ತು. ಇದೆಲ್ಲ ಸೇರಿ "ಹೋರಿ" ಚೇತರಿಸಿಕೊಳ್ಳುವುದು ತಡವಾಯಿತು. ಈಗ ಅದೆಲ್ಲ ಸರಿ ಹೋಗಿ ತಂಡ ರೀಯಾಕ್ಟಿವ್ ಆಗಿದೆ. ಭಾರೀ ಜೋಶ್ ನಲ್ಲಿ ಸಾಂಗ್ ಶೂಟಿಂಗ್ ನಲ್ಲಿ ಬ್ಯೂಝಿಯಾಗಿದೆ...
ಹೊಸ ಕನಸಲಿ..ನವ ಉಲ್ಲಾಸದಲಿ "ಹೋರಿ" ಮತ್ತೆ ಹೂಂಕರಿಸುತ್ತಿದೆ....

- ರೇವನ್ ಪಿ.ಜೇವೂರ್

Sunday, July 11, 2010

ಹರ್ಷನ ಕಥೆ ಹೇಳಿದ ಕೃಷ್ಣನ್ ಲವ್ ಸ್ಟೋರಿ

ಕೃಷ್ಣನ್ ಲವ್ ಸ್ಟೋರಿ. ಕನ್ನಡದ ಸದ್ಯದ ಯಶಸ್ವಿ ಚಿತ್ರ. ತೆರೆಗೆ ಬಂದ ಮೊದಲ ದಿನ ಇದಕ್ಕೆ ಉತ್ತಮ ಆರಂಭ ಸಿಕ್ಕಿದೆ. ಹಾಗೇ ಈಗ ಅದು ಮುಂದುವರೆದಿದೆ. ಕನ್ನಡ ಪ್ರೇಕ್ಷಕ ಏನ್ ಹೇಳ್ತಾನೆ ಅಂತ ಚಿತ್ರ ತಂಡ ತಿಳಿದುಕೊಂಡೂ ಬಂದಿದೆ. ಅದೇ ಖುಷಿಯಲ್ಲಿಯೇ ತಂಡ ಒಂದು ಸತ್ಯವನ್ನೂ ಹೊರಗೆಡವಿದೆ. ಮೊದಲೇ ಹೇಳಿದಂತೆ ಮಾತು ಉಳಿಸಿಕೊಂಡಿದೆ..ಇದರ ಅರ್ಥ, ನೈಜ ಪ್ರೇಮ ಕಥೆಯ ನಾಯಕ ಯಾರು ಅನ್ನೋದು ಈಗ ಗೊತ್ತಾಗಿದೆ.

ನಿರ್ದೇಶಕ ಶಶಾಂಕ ತಮ್ಮ ಚಿತ್ರದ ರಿಯಲ್ ಹೀರೋನನ್ನ ಮಾಧ್ಯಮಕ್ಕೆ ಪರಿಚಯಿಸಿದ್ದಾರೆ. ಈತ ಯಾರೂ ಅನ್ನುವ ಸಮ್ ಡಿಟೈಲ್ಸ್ ಕೂಡ ಕೊಟ್ಟಿದ್ದಾರೆ. ಕೇವಲ ಇದು ತಮ್ಮ ಸ್ನೇಹಿತನ ಜೀವನದಲ್ಲಿ ನಡೆದ ನೈಜ ಘಟನೆ. ಆತನೇ ಅಲ್ಲಿ ನಾಯಕ ಅಂತಲೇ ಚಿತ್ರದ ಆರಂಭದಿಂದಲೂ ಹೇಳ್ತಾ ಬಂದಿದ್ದರು. ಶೇಕಡ ೭೫ ರಷ್ಟು ನೈಜ ಘಟನೆ. ೨೫ ರಷ್ಟು ಸಿನೆಮಾ ಅಂತಲೇ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಜನ ಕೃಷ್ಣನನ್ನ ಲವ್ ಮಾಡಿದ್ದಾರೆ. ಉತ್ತಮ ಪ್ರತಿಕ್ರಿಯೇನು ನೀಡಿದ್ದಾರೆ. ನಿಜವಾದ ಕೃಷ್ಣ ಯಾರೂ...? ಏನ್ ಮಾಡ್ತಾಯಿದ್ದಾನೆ. ಇದಾನಾ ಇಲ್ವಾ..? ಯಾವಾಗ ಜನಕ್ಕೆ ತೋರಿಸ್ತೀರಾ...? ಅಂತ ಹಲವು ಪ್ರಶ್ನೆಗಳನ್ನೂ ಕೇಳಿದ್ದಾರೆ. ಈ ಎಲ್ಲ ಪ್ರಶ್ನೆಗೆ ಈಗ ತೆರೆ ಬಿದ್ದಿದೆ. ಉತ್ತರವೂ ಸಿಕ್ಕಿದೆ..

ಕೃಷ್ಣನ್ ಲವ್ ಸ್ಟೋರಿ ಬೇರೆ ಅದ್ಯಾರದೋ ಅಲ್ಲ. ಶಶಾಂಕನ ಶಿಷ್ಯನದ್ದು. ಹರ್ಷ ಅನ್ನೋ ಈತ ಈಗಾಗಲೇ ಚಿತ್ರರಂಗದಲ್ಲಿದ್ದಾನೆ. ಮೊಗ್ಗಿನ ಮನಸಲ್ಲಿ ರಾಧಿಕಾ ಪಂಡಿತ್ ಮೊಲದ ಪ್ರೇಮಿಯಾಗಿ ಕಾಣಿಸಿಕೊಂಡಿದ್ದ. ಕೃಷ್ಣನ್ ಲವ್ ಸ್ಟೋರಿಯಲಿ ಖಳನಾಯಕ ಪಾತ್ರವನ್ನೂ ನಿರ್ವಹಿಸಿದ್ದಾನೆ. ಈ ರೀತಿ ಚಿತ್ರರಂಗದ ನಂಟು ಬೆಳೆಸಿಕೊಂಡು ಬರುತ್ತಿದ್ದಾನೆ. ಇದೇ ಚಿತ್ರ ಪ್ರೀತಿಯಿಂದಲೇ ಹರ್ಷ ಈಗಷ್ಟೇ ಸೆಟ್ಟೇರಿದ "೨೦೧೨ " ಚಿತ್ರದ ಐವರು ನಾಯಕರಲ್ಲಿ ಒಬ್ಬನಾಗಿ ಕಾಣಿಸಿಕೊಳ್ತಾಯಿದ್ದಾನೆ.

ರಿಯಲ್ ಲೈಫ್ ನ ಈ ಪ್ರೇಮಿಯ ಜೀವನದಲ್ಲಿ ಹ್ಯಾಪಿ ಎಂಡಿಂಗ್ ಇದೆ. ಆದ್ರೆ, ಶಶಾಂಕ್ ಚಿತ್ರವನ್ನ ದು:ಖದಲ್ಲಿ ಅಂತ್ಯ ಮಾಡಿದ್ದಾರೆ. ಹರ್ಷನ ಹುಡುಗಿ ಸದ್ಯ ಸು:ಖವಾಗಿದ್ದಾರೆ. ಅದ್ಯಾರನ್ನೋ ಮದುವೆಯಾಗಿ ಅದೆಲ್ಲೋ ಸೆಟ್ಲ್ ಆಗಿದ್ದಾರೆ. ಒಂದು ಮಗು ಕೂಡ ಇದೆ. ಚಿತ್ರದಲ್ಲಿ ನಡೆಯುವಂತೆ ಹರ್ಷನ ಪ್ರೀತಿಸಿದ ಹುಡುಗಿ ನಿಜ ಜೀವನದಲ್ಲಿ ಮತ್ತೊಬ್ಬನೊಟ್ಟಿಗೆ ಓಡಿ ಹೋಗ್ತಾಳೆ. ಹಾಗೆ ಓಡಿ ಹೋದಾಗ ಆ ಹುಡುಗ ಅಪಘಾತದಲ್ಲಿ ಸತ್ತು ಹೋಗುತ್ತಾನೆ. ಈ ಗದ್ದಲದಲ್ಲಿ ಹರ್ಷನ ಪ್ರೀತಿ ಗೌಣವಾಗುತ್ತದೆ. ಹುಡುಗಿ ಮನೆಯವರು ಬೇರೊಬ್ಬನೊಂದಿಗೆ ಮದುವೆ ಮಾಡಿದ್ದಾರೆ. ಅದೇ ಹುಡುಗನ ಜೊತೆಗೆ ಹರ್ಷನ ಹುಡುಗಿ ಸದ್ಯ ಸಂಸಾರ ಮಾಡುತ್ತಿದ್ದಾಳೆ..

ಶಶಾಂಕ್ ಇನ್ನೊಂದು ಸ್ಟೆಪ್ ಮುಂದೆ ಹೋಗುವ ಪ್ಲಾನ್ ನಲ್ಲಿದ್ದಾರೆ. ನಿಜ ಜೀನದಲ್ಲಿ ಹರ್ಷನ ಕಥೆ ಎಂಡ್ ಆಗಿದೆ. ಚಿತ್ರದಲ್ಲಿ ಕಥೆ ಇನ್ನು ಉಳಿದಿದೆ. ಜನ ಸಹ ನಾಯಕನಿಗೆ ನ್ಯಾಯಕೊಡಿಸಿ ಅಂತ ಬೇಡ್ತಾಯಿದ್ದಾರಂತೆ. ಅದಕ್ಕೇನೆ "ಕೃಷ್ಣನ್ ಲವ್ ಸ್ಟೋರಿ" ಭಾಗ-2 ಮಾಡುವ ಇರಾದೆ ಪ್ರಕಟಿಸಿದ್ದಾರೆ. ಬರುವ ಮೂರು ತಿಂಗಳಲ್ಲಿ ಸ್ಕ್ರಿಪ್ಟಿಂಗ್ ಮುಗಿಸಿದ ಬಳಿಕ ಕೃಷ್ಣನ್ ಲವ್ ಸ್ಟೋರಿಯ ಭಾಗ ಎರಡರ ಚಿತ್ರೀಕರಣ ಆರಂಭಿಸಲಿದ್ದಾರೆ. ಮೊದಲ ಚಿತ್ರದಲ್ಲಿದ್ದ ಅಜಯ್ ರಾವ್ ಮತ್ತೆ ಮುಂದುವರೆಯಲ್ಲಿದ್ದಾರೆ. ರಾಧಿಕಾ ಪಂಡಿತ್ ಮೊದಲ ಭಾಗದಲ್ಲಿ ಸತ್ತು ಹೋಗಿದ್ದಾಳೆ. ರಾಧಿಕಾ ಅಣ್ಣನ ಪಾತ್ರವೂ ಇಲ್ಲಿರುವುದಿಲ್ಲ. ಇನ್ನುಳಿದ ಪಾತ್ರಗಳು ಮುಂದುವರೆಯುತ್ತವಂತೆ.

ಆದ್ರೆ, ಪಾರ್ಟ್ -೨ ದಲ್ಲಿ ಇರುವ ಕಥೆಯಲ್ಲ ಕಲ್ಪನಾತೀತ. ಇಲ್ಲಿ ಸತ್ಯ ಘಟನೆಯ ಸ್ಪರ್ಶ ಇರೋದೇಯಿಲ್ಲ. ಏನೇ ಇದ್ದರೂ ಅದು ಶಶಾಂಕ್ ಕಲ್ಪನೆ...ಹೀಗಂತ್ ಖುದ್ ಶಶಾಂಕ್ ಹೇಳಿಕೊಂಡಿದ್ದಾರೆ. ಇವರ ಹೊಸ ಹೆಜ್ಜೆಗೆ ಒಂದು ಗುಡ್ ಲಕ್.ಆದ್ರೂ, ಏನ್ ಕತೆ ಮಾಡ್ತಾರೇ ಅನ್ನೋದು ಸದ್ಯ ಇನ್ನು ಉಳಿದಿರುವ ಪ್ರಶ್ನೆ...

- ರೇವನ್ ಪಿ.ಜೇವೂರ್

Friday, July 9, 2010

ಗಾಳಿಯೇ ನೋಡು ಬಾ..

ಗಾಳಿಯೇ ನೋಡು ಬಾ..ದೀಪದಾ ನರ್ತನ.
ರಾತ್ರೀಯೆ ನೀಡು ಬಾ ಮಾಯದಾ ದರ್ಪಣ...

ಇದೆಂತ ಅದ್ಭುತ ಕಲ್ಪನೆ ಅಲ್ವಾ. ಗಾಳಿಯೂ ನಮ್ಮೊಟ್ಟಿಗೆ ಇರುತ್ತದೆ. ದೀಪವೂ ನಮ್ಮೊಟ್ಟಿಗೆ ದಿನವೂ ಪ್ರಜ್ವಲಿಸುತ್ತದೆ. ನರ್ತನ ಟಿವಿಗಳಲ್ಲಿ ಬರ್ತಾನೇ ಇರ್ತವೆ. ಇಂತಹ ಸಾಲುಗಳು ಹುಟ್ಟಲು ಸಾಧ್ಯವೆ. ಹಾಗೆ ಹುಟ್ಟಿದರೆ ಅದು ಕವಿ ಮನಸ್ಸಿನಲ್ಲಿ ಸಾಧ್ಯ. ರವಿ ಕಾಣದ್ದು..ಕವಿ ಕಂಡ ಅಂತರಾ ಅಲ್ಲ. ಅದು ಎಲ್ಲ ಕಾಲಕ್ಕೂ ನಿಜವೇ. ಬೀಸುವ ಗಾಳಿಗೆ...ಅತ್ತ..ಇತ್ತ ಆರಲು ಸಜ್ಜಾಗುವ ದೀಪದ ಅಂತ್ಯ ಇಲ್ಲಿ ಕವಿಗೆ ನರ್ತನ ಅನಿಸುತ್ತದೆ.

ಇಂತಹ ಸಾಲುಗಳು ಸುಮ್ಮನೆ ಪುಸ್ತಕದಲ್ಲಿ ಉಳಿದಿದ್ದರ ಹೆಚ್ಚು ಪ್ರಚಾರ ಸಿಗ್ತಿತ್ತೋ ಇಲ್ವೋ. "ಸಂಚಾರಿ" ಚಿತ್ರದಲ್ಲಿ ಜಯಂತ್ ಕಾಯ್ಕಿಣಿಯವರ ಸಾಲುಗಳಿವು.. ಪಲ್ಲವಿನೇ ಇಷ್ಟೊಂದು ಚೆಂದ ಅದ್ಮೇಲೆ ಚರಣ ಹೇಗಿರಬೇಕು..ನೀವೇ ಕಲ್ಪಿಸಿಕೊಳ್ಳಿ...

ನಿನ್ನಂತೆ ನನ್ನಾರು ಕಾಡಿಲ್ಲ..
ಅದುವೇ ಪ್ರೀತಿಯ ಲಕ್ಷಣ...

ಗಾಳಿಯ ಹಾಡಿಗೆ ಪ್ರೀತಿ ಸಾಲುಗಳು ಸೇರುತ್ತವೆ. ಪ್ರೀತಿ-ಪ್ರೇಮದ ಅಲೆಯನ್ನೂ ಹರಿಸುತ್ತವೆ. ಕಾರಣ ಕ್ರಿಮಿನಲ್ ವೊಬ್ಬನ ಪ್ರೇಮಕಥೆಯ ಚಿತ್ರವೇ "ಸಂಚಾರಿ". ಸಾಹಿತ್ಯವೂ ಮೌಲ್ಯಯುತವಾಗಿದೆ. ಗಾಳಿಯೇ ನೀ ನೋಡು ಬಾ...ಈ ಹಾಡೊಂದರ ಮೇಲೆನೆ ೨೦ ದಿನ ಕೆಲಸ ಮಾಡಲಾಗಿದೆ. ಅದು ಬೇಕು..ಇದು ಬೇಕು ಅಂತ ಕೊನೆಗೆ ಗಾಳಿಯೇ ನೀ ನೋಡು ಬಾ ಅನ್ನೊದು ಹೊರಹೊಮ್ಮಿದೆ.

ಸಂಚಾರಿಯಲ್ಲಿ ವಿ.ನಾಗೇಂದ್ರ ಪ್ರಸಾದ್ ವಿರಚಿತ ಗೀತೆಗಳು ಇವೆ. ಒಂದಕ್ಕಿಂತವೊಂದು ಚೆಂದನೆಯ...ತಣ್ಣನೆಯ ಸಾಹಿತ್ಯದ ಗೀತೆಗಳು ಅನಿಸದೇ ಇರದು. ಏಕೆಂದರೆ, ಮಧುರ ಸಂಗೀತಕ್ಕೆ ಉತ್ತಮ ಸಾಲುಗಳು ಅನಿಸುವುದೇ ಈ ಹಾಡಿನ ವಿಶೇಷತೆ. ಹೊಸ ಗಾದೆಗಳನ್ನೂ ಚಿತ್ರದ ಹಾಡೊಂದರಲ್ಲಿ ಪ್ರಯೋಗಿಸಲಾಗಿದೆ. ನಮ್ಮಜ್ಜ...ಮುತ್ತಜ್ಜ ಹೇಳಿ ಹೋದ ಗಾದೆಗಳು ಅದೆಲ್ಲೊ ಹೆಣ್ಣಿನ ಹೋಲಿಕೆ ಮಾಡುವ ಕೆಲಸ ಮಾಡಿದ್ದವು ಅಂತ ಹೇಳಬಹುದು. ಇದೇ ಹಳೆ ಗಾದೆಗಳ ಸಾಲಿಗೆ ಸೇರಿಸುವಂತ ಪ್ರಯತ್ನ ವಿ.ನಾಗೇಂದ್ರಪ್ರಸಾದ್ "ಸಂಚಾರಿ" ಚಿತ್ರದಲ್ಲಿ ಮಾಡಿದ್ದಾರೆ.. ಇದಕ್ಕೆ ಕೆಳಗಿನ ಸಾಲು ಸಾಕ್ಷಿ...

ಭೂಮಿ ಸುತ್ತೋದು ಕಾಣದು...
ಇಬ್ಬನಿ ಸದ್ದು ಕೇಳದು..
ಇವುಗಳ ಹಾಗೇಯೇ ಪ್ರಶ್ನೇ ಈ ನಾರಿ..

ವಿ.ನಾಗೇಂದ್ರ ಪ್ರಸಾದ್ ಇದೇ ಚಿತ್ರದಲ್ಲಿ ಇನ್ನೊಂದು ಹೊಸ ಪದ್ಯ ಬರೆದುಕೊಟ್ಟಿದ್ದಾರೆ. ಕಣ್ಣಾ ಸನ್ನೆಯಲಿ...ಹೆಣ್ಣಾ ಕೇಳೋ ನೀವ ಅನ್ನೊ ಈ ರಚನೆ ಹೊಸ ಅನುಭವ ಕೊಡ್ತದೆ. ಹೊಸ ಪದಗಳ ಪರಿಚಯವನ್ನೂ ಮಾಡಿಸ್ತವೆ. ಹೆಣ್ಣಿನ ಮನದಾಳದ ಪ್ರಶ್ನೆಗಳನ್ನ ಹೊರಗೆಡವುತ್ತವೆ....

ಯಾರೀವ..ಯಾರೀವನೂ..
ರೆಪ್ಪೆ ಸನ್ನೆಯಲ್ಲಿ ಒಪ್ಪೆ ಅನ್ನೋ ನೀವ..
ಮಾಯವಾ ಮಾಡೋನಿವ..
ಮನಸೆಂಬ ಖಾಲಿ ಜಾಗವಾ ಆಕ್ರಮಿಸೋವ
ಈ ಪ್ರೇಮಿನಾ ಕರೆದೆ ಮನಸಾರೆ...

ಸಂಚಾರಿಯ ಈ ಗೀತೆಗಳಲ್ಲ ಹಿಟ್ ಆಗಿವೆ. ಬಿರುಗಾಳಿ ಚಿತ್ರಕ್ಕೆ ಸಂಗೀತ ನೀಡಿದ ಅದೇ ಅರ್ಜುನ್ ಇದಕ್ಕೂ ಮ್ಯೂಸಿಕ್ ಮಾಡಿದ್ದಾರೆ. ಎಂದಿನಂತೆ ಸೋನು ನಿಗಮ್ ಹಾಡಿದ್ದಾರೆ. ಶ್ರೇಯಾ ಘೋಷಾಲ್ ಎರಡು ಹಾಡಿಗೆ ಧ್ವನಿಯಾಗಿದ್ದಾರೆ. ಕೇವಲ ಆಡಿಯೋ ಗೀತೆಗಳನ್ನ ಕೇಳಿದವರಿಗೆ ಈಗ ಹಾಡು ನೋಡ ಬಹುದು. ಚಿತ್ರ ತಂಡ ಈಗಾಗಲೇ ಮೂರು ಹಾಡುಗಳನ್ನ ಎಲೆಕ್ಟ್ಟಾನಿಕ್ ಮಾಧ್ಯಮಕ್ಕೆ ನೀಡಿದೆ.

ಸಾಹಿತ್ಯಕ್ಕೆ ತಕ್ಕನಾಗಿಯೇ ನಿರ್ದೇಶಕ ಕಿರಣ್ ಗೋವಿ "ಸಂಚಾರಿ" ಹಾಡುಗಳ ಚಿತ್ರೀಕರಣ ಮಾಡುವ ಪ್ರಯತ್ನ ಮಾಡಿದ್ದಾರೆ. ಇನ್ನುಳಿದಂತೆ ಸದ್ಯಕ್ಕೆ ಹಾಡುಗಳದ್ದೇ ಕಾರುಬಾರು. ಜುಲೈ ೧೬ ರಂದು ಚಿತ್ರ ತೆರೆಗೂ ಬರಲಿದೆ. ಬಂದ ಮೇಲೆ ಹಾಡು ಕೇಳಿದ ಜನ ಚಿತ್ರದ ಕಥೆ ನೋಡಿ ಏನ್ ಹೇಳ್ತಾರೋ ಏನೋ...ಹೊಸ ನಾಯಕ ರಾಜ್. ನಾಯಕಿ ಬಿಯಾಂಕಾ ದೇಸಾಯಿ ರಿಲೀಜ್ ನತ್ತ ಮುಖ ಮಾಡಿ ಕಾಯುತ್ತಿದ್ದಾರೆ...

- ರೇವನ್ ಪಿ.ಜೇವೂರ್

Thursday, July 8, 2010

ಮಾಸ್ಟರ್ ಕಿಷನ್ ಈಗ `೧೫' ರ ನಾಯಕ




ಕಿಷನ್ ಕಥೆ ಗೊತ್ತೇಯಿದೆ. ಪುಟ್ಟ ಹುಡುಗನಿದ್ದಾಗಲೇ ನಿರ್ದೇಶಕನಾದ ಪ್ರತಿಭಾವಂತ ಈತ. ಕನ್ನಡದ ಮಟ್ಟಿಗೆ ಅತಿ ಚಿಕ್ಕವಯಸ್ಸಿನ ಡೈರೆಕ್ಟರ್. ಪೇಪರ್ ಆಯೋ ಹುಡುಗರಿಂದ ಸ್ಪೂರ್ತಿ ಪಡೆದು `ಕೇರ್ ಆಫ್ ಫುಟ್ ಪಾತ್' ಮಾಡಿದ. ನೂರು ದಿನಗಳವರೆಗೂ ಚಿತ್ರ ಓಡ್ತು. ಚಿಕ್ಕ ಹುಡುಗನ ಚಿತ್ರ ಅನ್ನೋ ಕ್ರೇಜು. ಅಕ್ಷರ ಕಲಿಕೆಯ ಒಂದಷ್ಟು ಸಂದೇಶ. ಗುರಿ..ಗೊತ್ತು. ಬಡ ಮಕ್ಕಳಿಗೆ ದಾರಿ ತೋರುವ ಪ್ರಯತ್ನ. ಇವೆಲ್ಲ ಇದ್ದಿದ್ದರಿಂದಲೇ ಚಿತ್ರಕ್ಕೆ ಒಂದು ಮೌಲ್ಯ ಬಂತು. ಕಿಷನ್ ಗೆ ಎಲ್ಲಡೆ ಸುತ್ತುವ ಅವಕಾಶನೂ ಬಂತು...


ಇದು ಈಗ ಇತಿಹಾಸವೇ ಬಿಡಿ. ಮಗನನ್ನ್ ಪ್ರೋತ್ಸಾಹಿಸಿದ ಅಪ್ಪ ಶ್ರೀಕಾಂತ್ ಮಗನನ್ನ "ನಾಯಕ"ನನ್ನಾಗಿ ಮಾಡಿದ್ದಾರೆ. ತಾವೂ ಕೂಡ ಇದ್ದ ಕೆಲಸಕ್ಕೆ ಸಲಾಮ್ ಹೊಡೆದು "ನಿರ್ದೇಶಕ"ರೂ ಆಗಿದ್ದಾರೆ. ಕಾರಣ ಚಿತ್ರ ಪ್ರೀತಿ ಅನ್ನೋದು ಶ್ರೀಕಾಂತ್ ಕಾಂತಿ ತುಂಬಿದ ಟಾಕ್.


ಮಗನನ್ನು ನಾಯಕನಾಗಿಸುವ ಉತ್ಸಾಹದಲ್ಲಿ ಹದಿಹರೆಯದ ಕಿಷನ್ ಗೆ ನಾಯಕಿಯನ್ನೂ ತಾವೇ ಜೋಡಿ ಮಾಡಿದ್ದಾರೆ. ಪುತ್ರನ ೧೫ ರ ಹರೆಯದಲ್ಲಿ ನಾಯಕನನ್ನಾಗಿಸುವ ಹೊಸ ಹೆಜ್ಜೆ ಇವರದು. ಇದಕ್ಕೆ ಅದು ಹೇಗೆಲ್ಲ ಪ್ರತಿಕ್ರಿಯೆ ಬರಲಿವೆಯೋ..ಈ ದಿನ ಸದ್ಯ ಇನ್ನೂ ದೂರ..ಚಿತ್ರದ ಬಗ್ಗೆ ಈಗಷ್ಟೇ ಮೊದಲ ಪ್ರೆಸ್ ಮೀಟ್ ಆಗಿದೆ. ೧೫ ಎಂಬ ಹೆಸರಿಟ್ಟಿದ್ದೇವೆ. ಟೀನೇಜ್ ಚಿತ್ರ ನಮ್ಮದು ಅಂತ ಹೇಳಿ ಹೋಗಿದ್ದಾರೆ...



ಟೀನೇಜ್ ಅಂದ್ರೆ, ಇದು ೧೫ ರ ಹರೆಯ. ಇತ್ತ ಬಾಲ್ಯವೂ ಅಲ್ಲ. ಅತ್ತ ಯೌವ್ವನವೂ ಅಲ್ಲ. ಬಾಲ್ಯಕ್ಕೆ ಬಾಯ್ ಬಾಯ್..ಹರೆಯಕ್ಕೆ ಹಾಯ್ ..ಹಾಯ್ ಅನ್ನೊ ಸ್ಲೋಗನ್ ನ ಚಿತ್ರವಿದು. ಇನ್ನೂಂದು ಸಂಗತಿಯೆಂದ್ರೆ, ೧೫ ರ ತಳಮಳ...ರೋಮಾಂಚನ. ರಾಸಾಯಣ..ಕನಸು...ಮನಸ್ಸು..ದೇಹ... ಎಲ್ಲವನ್ನೂ ಬಿಂಬಿಸುವ ಚಿತ್ರವಿದು. ಈ ವಯಸ್ಸೇ ಒಂಥರಾ..ಅನ್ನೋ ಪುಟ್ಟ ಅಡಿ ಬರಹದಲ್ಲಿ ಇದನ್ನೆ ಬಿಂಬಿಸುವ ಸಾಹಸ ಮಾಡಲಾಗಿದೆ...


ಕಿಷನ್ ನಾಯಕಿ ರುಷಿತಾ ಪಾಂಡ್ಯ. ಈಕೆ ಮುಂಬೈ ನಿವಾಸಿ. ೧೫ ಚಿತ್ರದ ಮೂಲಕ ಕನ್ನಡಕ್ಕೆ ಪ್ರವೇಶ ಮಾಡ್ತಾಯಿದ್ದಾಳೆ. ವಯಸ್ಸು ಚಿತ್ರದ ಟೈಟಲ್ ನಂತೇನೆ ಬರೊಬ್ಬರಿ ೧೫ . ಶಾಲೆನೂ ಅಷ್ಟೆ. ಕಿಷನ್ ಥರವೇ ಎಸ್.ಎಸ್.ಎಲ್.ಸಿ ಓದುವ ಪುಟ್ಟಿ.


ಈಕೆಯದ್ದು ಬಣ್ಣದ ಬದುಕಿನೊಟ್ಟಿಗೆ ಘಾಢವಾದ ನಂಟು ಬೆಳೆಯುತ್ತಲೇ ಬಂದಿದೆ. ೬ ನೇ ವಯಸ್ಸಿನಲ್ಲಿಯೇ ಟಿವಿ ನೋಡಿ ನಾನೂ ಅಲ್ಲಿ ಕಾಣಿಸಿಕೊಳ್ಳಬೇಕೆನ್ನುವ ಆಸೆ ವ್ಯಕ್ತಪಡಿಸುತ್ತಿದ್ದಳಂತೆ. ಮಗಳ ಆಸೆಯನ್ನ ತಂದೆ-ತಾಯಿ ಪೋಷಿಸಿ ಬೆಳೆಸಿದ್ದಾರೆ. ಹಾಗಾಗಿ


ಪಿಯರ್ಸ್ ಸೋಪ್ ನ ಜಾಹೀರಾತು ನಲ್ಲಿ ಈಕೆ ಕಾಣಿಸಿಕೊಂಡಳು. ಪರಿಣಿತಾ ಚಿತ್ರದಲ್ಲಿ ವಿದ್ಯಾಬಾಲನ್ ಬಾಲ್ಯದ ಪಾತ್ರಕ್ಕೆ ಈಕೇನೆ ಆಯ್ಕೆ ಆಗಿದ್ದಳು. ಚಿತ್ರರಂಗ, ಕಿರುತೆರೆಯ ಜಾಹೀರಾತು ನಲ್ಲಿ ಆಗಾಗ ವರ್ಕ್ ಮಾಡ್ತಾನೆ ಇದ್ದಾಳೆ. ಆಗಲೇ ೧೫ ರ ಆಫರ್ ಈಕೆಯನ್ನ ಕನ್ನಡಕ್ಕೆ ತಂದಿದೆ. ಅತಿ ಚಿಕ್ಕ ವಯಸ್ಸಿನಲ್ಲಿಯೇ "ನಾಯಕಿ" ಪಟ್ಟ ನೀಡಿದೆ.


ಈ ಒಂದು ಅವಕಾಶದಿಂದ ಸದ್ಯ ರುಷಿತಾ ತುಂಬಾನೇ ಖುಷಿಯಲ್ಲಿದ್ದಾಳೆ. ಕಥೆಯನ್ನ ಕೇಳಿ ಇಷ್ಟದಿಂದಲೇ ಕೆಲಸ ಮಾಡುವುದಾಗಿ ಹೇಳಿದ್ದಾಳೆ. ಹಾಡು...ರೋಮ್ಯಾನ್ಸು...ಫೈಟು..ಸೆಂಟಿಮೆಂಟ್ಸು ಎಲ್ಲವೂ ಇದರಲ್ಲಿದೆ. ಒಂದೇ ಮಾತಿನಲ್ಲಿ ಹೇಳೋದಾದ್ರೆ ಇದು ಕಿಷನ್ ನಾಯಕನಾದ ಪಕ್ಕಾ ಕಮರ್ಷಿಯಲ್ ಸಿನೆಮಾ..


ಎಸ್.ಎಸ್.ಎಲ್.ಸಿ. ಹುಡುಗರ ಮನಸನ್ನ ಬಿಚ್ಚಿಡುವ ಈ ಚಿತ್ರದಲ್ಲಿ ಕಿಷನ್ ಒಬ್ಬ ಗಿಟಾರಿಸ್ಟ್. ಸಂಗೀತ ಸಾಧನದ ಪ್ರೀತಿಯೊಂದಿಗೆ ಪ್ರೀತಿ-ಪ್ರೇಮದಲ್ಲಿ ಮಿಂದೇಳುವ ಹುಡುಗ ಈತ. ಗಿಟಾರ್ ಕಲಿತಂತೇನೆ ಫೈಟ್ ಮಾಡಲು ಹಲವು ಸಮರ ಕಲೆಯ ಅಭ್ಯಾಸವನ್ನೂ ಈಗಾಗಲೆ ಮಾಡಿಕೊಂಡಿದ್ದಾನೆ. ಅಪ್ಪನ ಚಿತ್ರದಲ್ಲಿ ನಟಿಸುವ ಸಂತೋಷದಲ್ಲೂ ಇದ್ದಾನೆ..


ಚಿತ್ರದ ಚಿತ್ರೀಕರಣ ಬರುವ ಆಗಷ್ಟ್ ತಿಂಗಳಲ್ಲಿ ಆರಂಭವಾಗಲಿದೆ. ಸೈಕೋ ಚಿತ್ರದ ಕ್ಯಾಮೆರಾಮನ್ ೧೫ ಕ್ಕೆ ಕೆಲಸ ಮಾಡಲಿದ್ದಾರೆ. ಸಿದ್ಧಾರ್ಥ ವಿಪಿನ್ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಬೆಂಗಳೂರು ಅಲ್ಲದೇ ಅಮೆರಿಕದಲ್ಲೂ ಈ ಚಿತ್ರ ಚಿತ್ರೀಕರಣವಾಗಲಿದೆ. ಸದ್ಯಕ್ಕೆ ೧೫ ರ ಬಗ್ಗೆ ಇಷ್ಟೇ ಮಾತು..


-ರೇವನ್ ಪಿ.ಜೇವೂರ್

Sunday, July 4, 2010

ಬಾಲಿವುಡ್ ಕನ್ನಡ

ಕನ್ನಡದಲ್ಲಿ ಎಷ್ಟು ಜನ ಬಾಲಿವುಡ್ ನವರಿದ್ದಾರೆ. ಲೆಕ್ಕಹಾಕಿದರೆ ಬಂದು ಹೋಗಿವ ತಾರಾಬಳಗವೇ ಹೆಚ್ಚು. ಮುಂಬೈನಿಂದ ಆಗಾಗ ಬಂದು ನಟಿಸಿ ಹೊರಟು ಹೋಗುವುದು ಸದ್ಯದ ಟ್ರೆಂಡ್. ಕೆಲವರಲ್ಲಿ ಪೂಜಾ ಗಾಂಧಿಯಂತ ಹುಡುಗಿ ಇಲ್ಲಿಯೇ ಉಳಿದಿದ್ದಾರೆ. ಕನ್ನಡತಿನೇ ಆಗಿದ್ದಾರೆ. ತಕ್ಕಮಟ್ಟಿಕೆ ಕನ್ನಡವನ್ನೂ ಕಲಿತಿದ್ದಾರೆ. ಈಗ ವಿಷಯ ಇದಲ್ಲ. ಬಂದು ಹೋಗುವ ಮಂದಿಯದ್ದು.

ಕನ್ನಡಕ್ಕೆ ಬರುವ ಹಿಂದಿ ತಾರೆಯರು ಒಂದು ಇಂಗ್ಲೀಷ್ ಮಾತನಾಡುತ್ತಾರೆ. ಇಲ್ಲವೇ, ಹಿಂದಿ ಬೋಲ್ ಥೇ ಹೈ. ಇದಾದ ಮೇಲೆ ಒಂಚೂರು ಕನ್ನಡದ ಪದಗಳನ್ನ ಕಲಿತು ಆಶ್ಚರ್ಯ ಮೂಡಿಸುತ್ತಾರೆ. ತಮ್ಮ ಪಾತ್ರಕ್ಕೆ ಇನ್ನಾರೋ ಡಬ್ಬಿಂಗ್ ಮಾಡ್ತಾರೆ. ಆಗ ಕರೆದುಕೊಂಡು ಬಂದವರಿಗೆ ನೋಡಲು ಹಿಂದಿ ಸ್ಟಾರ್ ಸಿಗ್ತಾರೆ. ಆ ಮೂಕ ಕ್ಯಾರೆಕ್ಟರ್ ಗೆ ಧ್ವನಿ ತುಂಬುತ್ತಾರೆ. ಇದು ಸದ್ಯ ನಮ್ಮ ಕನ್ನಡ ಇಂಡಸ್ಟ್ರೀಲಿ ಪರಭಾಷೆಯರ ಬಗೆಗಿನ ಬೇಜಾನ್ ಒಲವು.
ಇವರಲ್ಲಿಯೇ ಕೆಲವರು ಕನ್ನಡ ಭಾಷೆಯನ್ನ ಕಲಿತು ಡಬ್ಬಿಂಗ್ ಮಾಡಿದವರಿದ್ದಾರೆ. ರಮೇಶ್ ಭಾಗವತ್ ನಿದೇರ್ಶನದ 'ಯಕ್ಷ' ಚಿತ್ರಕ್ಕೆ ಬಾಲಿವುಡ್ ನ ನಾನಾ ಪಾಟೇಕರ್ ಹೀಗೆನೇ ಮಾಡಿದ್ದಾರೆ. ಪೋಲಿಸ್ ಪಾತ್ರದಲ್ಲಿ ಅಭಿನಯಿಸಿದ ನಂತರ ನಾನಾ ಕನ್ನಡದಲ್ಲಿಯೇ ತಮ್ಮ ಕ್ಯಾರೆಕ್ಟರ್ ಗೆ ಜೀವ ಕೊಟ್ಟಿದ್ದಾರೆ. ಇದು ಹೇಗೆಲ್ಲ ಬರುತ್ತದೆ, ಜನ ಮೆಚ್ಚುತ್ತಾರಾ..ಇಲ್ವಾ. ಇದನ್ನ ಚಿತ್ರ ಬಂದ ಮೇಲೆ ಹೇಳಬಹುದು. ನಾನಾ ಪಾಟೇಕರ್ ಕಲಾಪ್ರೀತಿ ಮತ್ತು ಕನ್ನಡ ಪ್ರಯತ್ನ ಶ್ಲಾಘನೀಯ.
`ಜಮಾನಾ' ಚಿತ್ರದಲ್ಲೂ ಇದೇ ರೀತಿಯಾಗಿದೆ. ಜಾಕಿ ಶ್ರಾಫ್ ರಂತಹ ಹೀರೊ ಕನ್ನಡ ಕಲಿತಿದ್ದಾರೆ. ಸೆಟ್ ನಲ್ಲಿಯೇ ಡೈಲಾಗ್ ಹೊಡೆದಿದ್ದಾರೆ. ಚಿತ್ರೀಕರಣ ಮುಗಿದ ನಂತರ ತಮ್ಮ ಪೋಲಿಸ್ ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ. ಇದು ಅಷ್ಟೊಂದು ಪಕ್ಕಾ ಅನಿಸುವುದಿಲ್ಲ. ತೆರೆ ಮೇಲೆ ಇದನ್ನ ನೋಡಿದವರಿಗೆ ಒಳ್ಳೆಯ ಪ್ರಯತ್ನ ಅನಿಸುತ್ತದೆ. ಕಾರಣ, ಸರಿಯಾಗಿ ಲಿಪ್ ಸಿಂಕ್ ಆಗಿಲ್ಲ.ಇದೇನೇ ಇದ್ದರೂ ಜಾಕಿ ಶ್ರಾಫ್ ಡಬ್ಬಿಂಗ್ ಕಹಾನಿ ಮೆಚ್ಚಲೇಬೇಕು. ಕಿಷನ್ ನಿದೇರ್ಶನದ `ಕೇರ್ ಆಫ್ ಫುಟ್ ಪಾತ್' ಚಿತ್ರದಲ್ಲಿ ಜಾಕಿ ಜೆಸ್ಟ್ ಕಾಣಿಸಿಕೊಂಡಿದ್ದರು. ಕನ್ನಡದ ಎರಡನೇ ಸಿನೆಮಾದಲ್ಲಿ ಡಬ್ಬಿಂಗ್ ಮಾಡಿ ಸುದ್ದಿ ಮಾಡಿದ್ದಾರೆ.

ಬಾಲಿವುಡ್ ಮಂದಿಯ ಈ ಕನ್ನಡ ಪ್ರೀತಿ ನಟರಿಗಷ್ಟೆ ಸೀಮಿತವಾಗಿಲ್ಲ. ಗಾಯಕರಿಗೂ ಇದು ಮೀಸಲು. ಸ್ವಲ್ಪ ಹಿಂದೆ ಹೋದರೆ, `ಒಂದೇ ಬಳ್ಳಿಯ ಹೂಗಳು' ಚಿತ್ರದ ಹಾಡೊಂದಕ್ಕೆ ಮುಹ್ಮದ್ ರಫೀ 'ನೀ..ನೆಲ್ಲಿ ನಡೆವೆ ದೂರ... ಅನ್ನೋ ಹಾಡು ಹಾಡಿದ್ದಾರೆ. ಲತಾ...ಆಶಾ ಕೂಡ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲಲ. ಇತ್ತೀಚಿಗೆ `ಮತ್ತೆ ಮುಂಗಾರು ' ಚಿತ್ರಕ್ಕೆ ಆಶಾ ಹಾಡಿದ್ದು ಗೊತ್ತೇಯಿದೆ...

ಇನ್ನು ಹೊಸಬರೋ...ಇವರಂತು ಕನ್ನಡದ ಗಾಯಕರೇ ಆದಂತಿದೆ. ಇಲ್ಲವೇ ಮಾಡಿದಂತಿದೆ. ಏಕೆಂದರೆ, ಸೋನು ನಿಗಮ್ ಹಾಡು ಸದ್ಯದ ಬಹುತೇಕ ಚಿತ್ರದಲ್ಲಿ ಇದ್ದೇ ಇರುತ್ತದೆ. ಶ್ರೇಯಾ ಘೋಷಾಲ್ ಕೂಡ ಒಂದು ಹಾಡಿಗೆ ಧ್ವನಿಯಾಗಿರುತ್ತಾರೆ. ಕುನಾಲ್ ಗಾಂಜಾವಾಲಾ ಇದೇ ಸಾಲಿಗೆ ಸೇರುವ ಮತ್ತೊಬ್ಬ ಬಾಲಿವುಡ್ ಗಾಯಕ. ಇವರ ಮುಂದೆ ಕನ್ನಡದವರು ಕಳೆದು ಹೋಗುತ್ತಿದ್ದಾರೆ.

ಇದು ಏನಕ್ಕೆ ಇದನ್ನ ಹೇಳುವುದು ಬೇಡ ಬಿಡಿ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಕನ್ನಡದವರಲ್ಲದ ಕನ್ನಡದ ಪ್ರೀತಿ ಇಲ್ಲಿ ದಿನೇ..ದಿನೇ ಹೆಚ್ಚುತ್ತಿದೆ. ಇದರ ಹಿಂದಿನ ರಹಸ್ಯವೇನು..ಇದನ್ನೂ ಹೇಳಬೇಕಿಲ್ಲ. ಚಿತ್ರ ಜಗತ್ತಿನ ಮಂದಿ ಸಿನೆಮಾ ಪ್ರಮೋಟ್ ಮಾಡಲು ಏನೇಲ್ಲ ಮಾಡ್ತಾರೆ. ಇದು ಬಣ್ಣದ ಭೂಮಿಯಲ್ಲವೇ...ಇಲ್ಲಿ ಸದಾಕಾಲ ಓಡುವುದು ಸಿರ್ಫ್ ಪೈಸಾ..ಪೈಸಾ....

- ರೇವನ್ ಪಿ.ಜೇವೂರ್

Friday, July 2, 2010

ರಾ..ಗಿಣಿ ಏನು ನಿನ್ನ ಹೋಳಿ...


ರಾಗಿಣಿ...ವೀರಮದಕರಿಯ ಕುವರಿ. ನಾಯಕಿಯಾದ ಮೊದಲ ಚಿತ್ರ, ಹೀಗನ್ನುತ್ತದೆ ಚಿತ್ರಪ್ರೇಮಿಗಳ ಚಿತ್ರಾನುಭವ.ಆದ್ರೆ, ಈ ನಟಿಯ ಮೊದಲ ಸಿನೆಮಾ ವೀರಮದಕರಿ ಅಲ್ಲವೇ ಅಲ್ಲ. ಶಂಕರಲಿಂಗ್ ಸುಗ್ನಳ್ಳಿ ನಿದೇರ್ಶನ `ಹೋಳಿ'ನೇ ರಾಗಿಣಿಯನ್ನು ತೆರೆಗೆ ತಂದ ಮೊದಲು ಸಿನೆಮಾ. ಈ ಮೊದಲು ಕ್ಯಾಟ್ ವಾಕ್ ಮಾಡಿದ ಬೆಡಗಿ ಈಕೆ. ಇದಕ್ಕೂ ಮುನ್ನ ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಮಹಿಳೆಯರ ಕಣ್ಣು ಅರಳಿಸಿದ್ದು ಈ ಹುಡುಗಿಯ ಜರ್ನಿಯ ಹಿಸ್ಟರಿ...

ಈಗ ಕ್ಯಾಟ್ ವಾಕ್ ನಿಂದ ರಾಗಿಣಿ ದೂರವೇ ಉಳಿದಿದ್ದಾರೆ. ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದು ಇದ್ದೇ ಇದೆ. ವೀರಮದಕರಿ ಈ ನಟಿಗೆ ರಾಗವು ತಂದು ಕೊಡ್ತತು. ಲಯವನ್ನೂ ಹೇಳಿಕೊಡ್ತುವೆ. ಅದಕ್ಕೇನೆ ಕನ್ನಡದಲ್ಲಿ ಈ ಪಂಜಾಬಿ ಹುಡುಗಿಗೆ ಸದ್ಯ ಎಲ್ಲಿಲ್ಲದ ಆಫರ್. ಇದೇ ಕ್ರೇಜ್ ನಲ್ಲಿಯೇ ಇತ್ತೀಚಿಗೆ ಶಂಕರ್ ಐಪಿಎಸ್ ನಲ್ಲಿ ಕುಣಿದು ಕುಪ್ಪಳಿ ಕಣ್ಮನ ಸೆಳೆದಾಗಿದೆ. ಗಂಡೆದೆ ಅಂತ ಚಿರಂಜೀವಿ ಸರ್ಜಾ ಜೊತೆಗೆ ಮೈಕುಣಿಸಿ ಇನ್ನೇನು ರಿಲೀಜ್ ಗೂ ಸಜ್ಜಾಗಿದ್ದಾರೆ.


ಆದ್ರೆ, ರಾಗಿಣಿಯ ಮೊದಲ ಚಿತ್ರ ಹೋಳಿ ಈಗ ತೆರೆಕಂಡಿದೆ. ವೀರಮದಕರಿ ಸೆಟ್ಟೇರುವ ಮೊದಲ ಹೋಳಿ ಮುಹೂರ್ತ ಮುಗಿಸಿಕೊಂಡಿತ್ತು. ವೆಂಕಟೇಶ್ ಅನ್ನೊ ಪ್ರೊಡ್ಯೂಸರ್ ಮಗನ್ನೇ ಹಾಕಿಕೊಂಡು ಮಿಸ್ಟರ್ ಶಂಕರಲಿಂಗ್ ಸುಗ್ನಳ್ಳಿ ಹೋಳಿಗೆ ರಂಗು ಬೆರಸಿದ್ದರು. ಕಾಮಣ್ಣ - ರತಿದೇವಿ ಕಥೆಗೆ ಒಂದಿಷ್ಟು ಗ್ರಾಫಿಕ್ಸ್ ಟಚ್ ನೀಡಿದ್ದಾರೆ.ಉತ್ತರ ಕರ್ನಾಟಕದ ಸೊಗಡನ್ನ ಬೆರಸಿ ದೇವದಾಸಿ ಪದ್ಧತಿಯ ಮೇಲೂ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ.

ಚಿತ್ರವನ್ನ ಆಗ ತರಬೇಕು.ಈಗ ಬಿಡುಗಡೆ ಮಾಡಬೇಕು.ಇಂತಹ ಲೆಕ್ಕಾಚಾರದಲ್ಲಿಯೆ ನಿದೇರ್ಶಕರು ರಿಲೀಜ್ ದಿನವನ್ನ ಮುಂದಕ್ಕೆ ತಳ್ಳಿದರು. ಕ್ರಿಕೆಟ್ ಮ್ಯಾಚ್ ನ ನೆಪವನ್ನೂ ಒಡ್ಡಿ ಹೋಳಿಯನ್ನ ರಿಲೀಜ್ ಮಾಡಿರಲಿಲ್ಲ. ಅದೇನು ತಿಳಿಯಿತೋ ಏನೋ. ಹೋಳಿಯನ್ನ ರಿಲೀಜ್ ಮಾಡಿದ್ದಾರೆ. ದುರಂತ ಅಂದರೆ, ಇದು ರಾಗಿಣಿಯ ಮೊದಲ ಸಿನೆಮಾ ಅಂದರೆ ಸದ್ಯ ನಂಬೋರೇಯಿಲ್ಲ. ಕಾರಣ. ಗ್ಲಾಮರ್ ಜಗತ್ತಿನ ಹುಡುಗಿ ಇಂತಹ ಚಿತ್ರ ಮಾಡಲು ಸಾಧ್ಯವೇ ಅನ್ನೊ ಒಂದು ಪುಟ್ಟ ಅನುಮಾನ ಬಂದು ಹೋಗುತ್ತದೆ. ಹಾಗೇನೆ ವೀರಮದಕರಿನೇ ರಾಗಿಣಿ ಮೊದಲ ಸಿನೆಮಾ ಅನ್ನೊ ಛಾಪು ಮೂಡಿಯಾಗಿದೆ.

ಇನ್ನೊಂದು ಸಂಗತಿಯೆಂದ್ರೆ, ಇಷ್ಷು ವರ್ಷವಾದರೂ ಸಹ ರಾಗಿಣಿಗೆ ಮೊದಲ ಚಿತ್ರ ದಮೋಹ ಹೋಗಿಲ್ಲ. ತನ್ನ ಮೊದಲ ಸಿನಮಾ ಗುರುವಿದಂತೆ ಅಂತಲೆ, ಅಭಿನಯ ಕಲಿತ ಕಥೆ ಹೇಳ್ತಾರೆ. ಹಾವ-ಭಾವಗಳ ಏರಿಳಿತ ತಿಳಿದೆ ಅಂತ ಅನುಭವ ಬಿಚ್ಚಿಡ್ತಾರೆ. ಇದು ಹೌದು ಅಂತ ನಂಬಲೇಬೇಕು.ಸುಮಾರು ಚಿತ್ರಗಳನ್ನ ಕೊಟ್ಟ ಶಂಕರಲಿಂಗ ಸುಗ್ನಳ್ಳಿ ಜಾನಪದ ಕಥೆಗಳಿಗೆ ಸಿನಿಮಾ ರೂಪಕೊಟ್ಟವರು. `ಕಡ್ಲಿಮಟ್ಟಿ ಮಾಸ್ತರ' ಚಿತ್ರ ಮಾಡಿ ಭೇಷ್ ಅನಿಸಿಕೊಂಡವರು.

ಆದ್ರೆ, ಹೋಳಿ ಗೆ ಮೊದಲ ದಿನ ಹೇಳಿಕೊಳ್ಳುವಂತ ರೆಸ್ಪಾನ್ಸ್ ಬಂದಿಲ್ಲ. ಒಂದೇ ದಿನ ಕನ್ನಡದ 6 ಚಿತ್ರಳು ತೆರೆಗೆ ಬಂದಿವೆ. ಇವುಗಳಲ್ಲಿ ಕೆಲವನ್ನ ಬಿಟ್ರೆ, ಎಲ್ಲವೂ ಬೇಗ ಡಬ್ಬ ಸೇರುವ ಚಿತ್ರಗಳೆ.ಹಾಗಾಗಿ ರಾಗಿಣಿ ಸಿನೆಮಾ ಏನ್ ಮಾಡ್ತದೋ...ಏನೋ...

-ರೇವನ್ ಪಿ.ಜೇವೂರ್